ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣವಾದ ದೇವರಮನೆ ಮೋಜು, ಮಸ್ತಿಯ ಅಡ್ಡವಾಗಿದೆ. ಇದರಿಂದಾಗಿ ಶ್ರೀ ಕ್ಷೇತ್ರ ಕಾಲಭೈರವೇಶ್ವರನ ಸನ್ನಿಧಿಗೆ ಆಗಮಿಸುವ ಭಕ್ತರಿಗೆ ಮುಜುಗರ ಉಂಟಾಗಿದೆ.
ದೇವರಮನೆಗೆ ಸದಾ ಪ್ರವಾಸಿಗರು ಆಗಮಿಸುತ್ತಾರೆ.ಈಗ ನೈಋತ್ಯ ಮುಂಗಾರು ಮಳೆ ಸುರಿಯುವ ಅವಧಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಪ್ರವಾಸಿಗರ ಹುಚ್ಚು ಕುಣಿತ ಮಲೆನಾಡ ಪ್ರಕೃತಿ ಮಡಿಲಿನ ಸೌಂದರ್ಯ ನೋಡಲು ಬರುವ ಪ್ರವಾಸಿಗರಿಗೆ ಮುಜುಗರ ತಂದಿದೆ.
ದೇವರಮನೆಯಲ್ಲಿ ಹೊಯ್ಸಳರ ಕಾಲದ ಇತಿಹಾಸ ಪ್ರಸಿದ್ಧ ಕಾಲಭೈರವೇಶ್ವರನ ದೇವಾಲಯವಿದೆ. ಈ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಮದ್ಯ ಕುಡಿದು, ಧಮ್ ಹೊಡೆದುಕೊಂಡು, ರಸ್ತೆ ಮಧ್ಯೆ ಮೋಜು, ಮಸ್ತಿ ಮಾಡುವ ಪ್ರವಾಸಿಗರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ, ಓಡಾಡಲು ಜಾಗವಿಲ್ಲದಂತೆ ಆಗಿದೆ.
ಕೆಲವು ಪ್ರವಾಸಿಗರು ರಸ್ತೆ ಮಧ್ಯೆ ಕಾರು ನಿಲ್ಲಿಸಿಕೊಂಡು ಡ್ಯಾನ್ಸ್ ಮಾಡುತ್ತಿದ್ದಾರೆ. ಜೋರಾಗಿ ಕಿರುಚಾಡಿ ಗದ್ದಲವನ್ನು ಎಬ್ಬಿಸುತ್ತಿದ್ದಾರೆ. ರಸ್ತೆ ಮಧ್ಯೆ ಕಾರು ನಿಲ್ಲಿಸಿಕೊಂಡು ಕುಣಿದ ಕುಪ್ಪಳಿಸುತ್ತಿರುವ ಪ್ರವಾಸಿಗರು ಯಾರ ಮಾತನ್ನೂ ಸಹ ಕೇಳುತ್ತಿಲ್ಲ.
ಯಾರಿಗೂ ಪೊಲೀಸರ ಭಯವಿಲ್ಲ. ಸ್ಥಳೀಯರ ಮಾತನ್ನು ಕೇಳುತ್ತಿಲ್ಲ. ದೇವರಮನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದೆ. ಆದರೆ ಬೆರಳೆಣಿಕೆಯಷ್ಟು ಪೊಲೀಸರು ದೇವರಮನೆಯಲ್ಲಿ ಭದ್ರತೆಗೆ ನಿಯೋಜನೆಗೊಂಡರೆ ಉಳಿದ ಕೆಲಸ ಯಾರು ಮಾಡಬೇಕು? ಎಂಬುದು ಪ್ರಶ್ನೆಯಾಗಿದೆ.