ಬೆಂಗಳೂರು: ಬಿಎಂಟಿಸಿ ಕಾರ್ಯಾಗಾರಗಳಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಬಿಎಂಟಿಸಿ ಮುಂದಾಗಿದ್ದು, ಬಿಬಿಎಂಪಿ ಸಹಕಾರದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿದೆ. ನಗರದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ಉತ್ಪತ್ತಿ ತಾಣಗಳಾಗುವ ಸ್ಥಳಗಳ ಸ್ವಚ್ಛತೆಗೆ ಆದ್ಯತೆ ನೀಡಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿ.ಎಂ.ಟಿ.ಸಿ.) ಬೆಂಗಳೂರು ನಗರ ಮತ್ತು ಅದಕ್ಕೆ ಸುತ್ತಮುತ್ತಲಿನ ಉಪನಗರ ಹಾಗೂ ಗ್ರಾಮಗಳಿಂದ ನಗರದೊಳಗೆ ನಿರಂತರ ಸಾರಿಗೆ ಸೌಲಭ್ಯ ಒದಗಿಸಲು 49 ಘಟಕಗಳು, 10 ಟಿಟಿಎಂಸಿ, ಮೂರು ಪ್ರಮುಖ ಬಸ್ ನಿಲ್ದಾಣಗಳು (ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್. ಮಾರುಕಟ್ಟೆ, ಶಿವಾಜಿನಗರ ಬಸ್ ನಿಲ್ದಾಣ) ಮತ್ತು 4 ಕಾರ್ಯಾಗಾರಗಳನ್ನು ಸ್ಥಾಪಿಸಿದೆ
ಬೆಂಗಳೂರು ನಗರದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡೆಂಗಿ ನಿಯಂತ್ರಣಕ್ಕೆ ವಿವಿಧ ಮಾರ್ಗದರ್ಶನಗಳನ್ನು ನೀಡಿದೆ. ಈ ಮಾರ್ಗದರ್ಶನಗಳ ಆಧಾರದ ಮೇಲೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ತನ್ನ ಎಲ್ಲ ಘಟಕಗಳು, ಟಿಟಿಎಂಸಿಗಳು, ಮತ್ತು ಪ್ರಮುಖ ಬಸ್ ನಿಲ್ದಾಣಗಳಲ್ಲಿ ನೀರು ನಿಲ್ಲದಂತೆ ಸ್ವಚ್ಚತಾ ಕ್ರಮಗಳನ್ನು ಕೈಗೊಳ್ಳಲು ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಅವರು, ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ, ಘಟಕ ವ್ಯವಸ್ಥಾಪಕರುಗಳಿಗೆ, ನಿಲ್ದಾಣಾಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ