ಮಂಗಳೂರು: ನಗರ ಪೊಲೀಸ್ ಆಯುಕ್ತರಾಗಿ ಸುಧೀರ್ ಕುಮಾರ್ ರೆಡ್ಡಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅರುಣ್ ಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಬದಲಾವಣೆಗೆ ಕೈ ಹಾಕಿದ್ದಾರೆ. ಹಲವು ವರ್ಷಗಳಿಂದಲೂ ಒಂದೇ ಠಾಣೆ ವ್ಯಾಪ್ತಿಯಲ್ಲಿ ಠಿಕಾಣಿ ಹೂಡಿದ್ದ ಪೊಲೀಸ್ ಸಿಬ್ಬಂದಿಯನ್ನು ಬೇರೆ ಬೇರೆ ಠಾಣೆಗೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.

ಬಜಪೆ, ಮೂಡುಬಿದಿರೆ, ಕೊಣಾಜೆ, ಉಳ್ಳಾಲ, ಉರ್ವ, ಸಿಸಿಆರ್ಬಿ, ಸಿಸಿಬಿ, ಸಂಚಾರ ಠಾಣೆ, ಸೆನ್ ಠಾಣೆಗಳಲ್ಲಿದ್ದ ಎಎಸ್ಐ, ಕಾನ್ಸ್ಟೆಬಲ್ ಸೇರಿದಂತೆ ಸಿಬ್ಬಂದಿಯನ್ನು ನಾನಾ ಠಾಣೆಗಳಿಗೆ ವರ್ಗಾಯಿಸಲಾಗಿದೆ. ಇದರಲ್ಲಿ ಕೆಲವರು ಈಗಾಗಲೇ ವರ್ಗಾವಣೆ ಕೇಳಿ ಪ್ರಸ್ತಾವನೆ ಸಲ್ಲಿಸಿದ್ದರು. ಇದೀಗ, ಮಂಗಳೂರು ನಗರ ವ್ಯಾಪ್ತಿಯ 32 ಮಂದಿ ಹೆಡ್ ಕಾನ್ಸ್ಟೇಬಲ್ಗಳು ಹಾಗೂ 14 ಮಂದಿ ಕಾನ್ಸ್ಟೇಬಲ್ಗಳನ್ನು ವಿವಿಧ ಠಾಣೆಗಳಿಗೆ ವರ್ಗಾವಣೆಗೊಳಿಸಲಾಗಿದೆ.
ಈ ಪೊಲೀಸ್ ಸಿಬ್ಬಂದಿ ಕರ್ತವ್ಯದಿಂದ ಬಿಡುಗಡೆಗೊಂಡ ಹಾಗೂ ವರ್ಗಾವಣೆಗೊಳಿಸಿದ ಠಾಣೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಬಗ್ಗೆ ತಪ್ಪದೇ ಕಚೇರಿಗೆ ಪಾಲನಾ ವರದಿ ಸಲ್ಲಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಆದೇಶದಲ್ಲಿ ಸೂಚಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 7 ಎಎಸ್ಐ , 31 ಹೆಡ್ ಕಾನ್ಸ್ಟೇಬಲ್, 78 ಕಾನ್ಸ್ಟೇಬಲ್ಗಳನ್ನು ಆಡಳಿತಾತ್ಮಕ/ಸಾರ್ವಜನಿಕ ಹಿತದೃಷ್ಟಿಯ ಮೇರೆಗೆ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಳಿಸಲಾಗಿದೆ ಎಂದು ದ.ಕ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
