ದೇವನಹಳ್ಳಿ: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಸಾಮೂಹಿಕ ನಮಾಜ್ ಮಾಡಿರುವ ಆರೋಪ ಕೇಳಿಬಂದಿದ್ದು, ವೈರಲ್ ಆಗಿರುವ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಏರ್ಪೋರ್ಟ್ ಆಡಳಿತ ಮಂಡಳಿ ಅಲರ್ಟ್ ಆಗಿದ್ದು, ಏರ್ಪೋರ್ಟ್ ಅರೈವಲ್ ಗೇಟ್ ಬಳಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ರಯಾಣಿಕರು ಎಲ್ಲೂ ಪ್ರಾರ್ಥನೆ ಮಾಡಲು ಅವಕಾಶ ನೀಡದಂತೆ ನೋಡಿಕೊಳ್ಳಲು ಖಾಸಗಿ ಭದ್ರತಾ ಸಿಬ್ಬಂದಿಯನ್ನ ಏರ್ಪೋರ್ಟ್ ಆಡಳಿತ ಮಂಡಳಿ ನಿಯೋಜಿಸಿದೆ.
ಹಜ್ ಯಾತ್ರಿಕರನ್ನು ಬೀಳ್ಕೊಡಲು ಬಂದಿದ್ದ ಕೆಲವರು ವಿಮಾನ ನಿಲ್ದಾಣದ ಟರ್ಮಿನಲ್ ಒಳಭಾಗದಲ್ಲೇ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಸಾಮೂಹಿಕ ನಮಾಜ್ ನಡೆಯುತ್ತಿದ್ದರೂ ಸಿಬ್ಬಂದಿ ನೋಡುತ್ತಾ ಮೌನವಾಗಿರುವ ವಿಡಿಯೋ ವೈರಲ್ ಆಗಿತ್ತು. ಹೀಗಾಗಿ ಮತ್ತೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಿರುವ ಏರ್ಪೋರ್ಟ್ ಆಡಳಿತ ಮಂಡಳಿ, ಅಗತ್ಯ ಕ್ರಮಕ್ಕೆ ಮುಂದಾಗಿದೆ.
ಏರ್ಪೋರ್ಟ್ನಲ್ಲಿ ನಮಾಜ್ ಮಾಡಿರುವ ವಿಡಿಯೋ ವೈರಲ್ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಲು ಇವರಿಗೆ ಅನುಮತಿ ಕೊಟ್ಟಿದ್ದು ಯಾರು? ಮುಸಲ್ಮಾನ ಬಾಹುಳ್ಯ ದೇಶಗಳಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಿಷೇಧಿಸಿರುವಾಗ ನಮ್ಮ ದೇಶದಲ್ಲಿ ಏಕೆ ಅನುಮತಿ ಕೊಡಬೇಕು? ಎಂದು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನಕ್ಕೆ ತಹಶೀಲ್ದಾರಿಂದ ಹಿಡಿದು ಡಿಸಿ,ಎಸ್ಪಿವರೆಗೂ ಅನುಮತಿ ಪಡೆಯಬೇಕೆಂದು ಆದೇಶ ಹೊರಡಿಸುವ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಬಾರದು ಎಂದು ಹೇಳುವುದಕ್ಕೆ ಧೈರ್ಯವಿಲ್ಲವೇ? ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಿದವರ ವಿರುದ್ದ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
For More Updates Join our WhatsApp Group :
