ಬೆಂಗಳೂರು: ಆ. 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅದ್ದೂರಿಯಾಗಿ ಹಳದಿ ಲೈನ್ ಮೆಟ್ರೋಗೆ ಚಾಲನೆ ನೀಡಿದ್ದಾರೆ. ಮೊದಲ ದಿನವೇ ಪ್ರಯಾಣಿಕರಿಂದ ತುಂಬಿ ತುಳುಕಿತ್ತು. ಇದೀಗ ಪ್ರಯಾಣಿಕರ ಸಂಖ್ಯೆ 10 ಲಕ್ಷ ದಾಟಿದೆ. ಹೀಗಿರುವಾಗ ಮೆಟ್ರೋ ರೈಡ್ ಮಾಡಲು ಬಂದ ಪ್ರಯಾಣಿಕರೊಬ್ಬರಿಗೆ ದಂಡದ ಅನುಭವವಾಗಿದೆ. 20 ನಿಮಿಷಕ್ಕಿಂತ ಹೆಚ್ಚು ಸಮಯ ಕಾದಿದ್ದಕ್ಕೆ 50 ರೂ. ದಂಡ ಪಾವತಿಸಬೇಕಾಗಿ ಬಂದಿದೆ.
ನಮ್ಮ ಮೆಟ್ರೋದಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ಒಂದೇ ನಿಲ್ದಾಣದಲ್ಲಿ ಕಾಯುವಂತಿಲ್ಲ ಎಂಬ ನಿಯಮವಿದೆ. ಇದು ಕೆಲವರಿಗೆ ಗೊತ್ತಿದ್ದರೆ ಮತ್ತೆ ಕೆಲವರಿಗೆ ಗೊತ್ತಿಲ್ಲದೆ ದಂಡ ಕಟುತ್ತಾರೆ. ಇದೀಗ ಇಂತಹದೇ ಒಂದು ಘಟನೆ ನಡೆದಿದೆ. ಮೆಟ್ರೋ ಮಿಸ್ ಮಾಡಿಕೊಂಡ ಪ್ರಯಾಣಿಕನಿಗೆ 50 ರೂ ದಂಡ ವಿಧಿಸಲಾಗಿದೆ.
ಸಿಲ್ಕ್ ಬೋರ್ಡ್ ಟು ಆರ್.ವಿ ರಸ್ತೆಗೆ ಹೋಗುವ ಪ್ಲ್ಯಾನ್ನಲ್ಲಿದ್ದ ಪ್ರಯಾಣಿಕ, ಟಿಕೆಟ್ ಪಡೆದು ಒಳಗೆ ಹೋಗಿದ್ದಾರೆ. ರೈಲು ಬರುವವರೆಗೂ ಕಾದಿದ್ದಾರೆ. ಆದರೆ, ಜನ ಹೆಚ್ಚು ಇದ್ದಿದ್ದರಿಂದ ಬಂದ ರೈಲು ಹತ್ತಲು ಸಾಧ್ಯವಾಗಿಲ್ಲ. ಬಳಿಕ ಮುಂದಿನ ರೈಲಿಗಾಗಿ 25 ನಿಮಿಷ ಕಾಯಲು ಆಗಲ್ಲ ಅಂತ ವಾಪಸ್ ಬರಲು ತೀರ್ಮಾನಿಸಿದ್ದಾರೆ. ಆದರೆ, ಹೊರಗೆ ಬರುವಾಗ 20 ನಿಮಿಷಕ್ಕಿಂತ ಹೆಚ್ಚು ಸಮಯ ನಿಲ್ದಾಣದಲ್ಲಿದ್ದೀರಿ ಎಂದು ಬಿಎಂಆರ್ಎಲ್ ಸಿಬ್ಬಂದಿ 50 ರೂ. ದಂಡ ವಿಧಿಸಿದ್ದಾರೆ.
ಬಿಎಂಆರ್ಎಲ್ನ ಈ ನಿಯಮ ಮೊನ್ನೆಯಷ್ಟೇ ಉದ್ಘಾಟನೆ ಆಗಿರುವ ಹಳದಿ ಲೈನ್ ಮೆಟ್ರೋಗೂ ಅನ್ವಯಿಸಿರುವುದು ಪ್ರಯಾಣಕರಿಗೆ ಸದ್ಯ ಸಮಸ್ಯೆ ಉಂಟು ಮಾಡಿದೆ. ಏಕೆಂದರೆ ಹಳದಿ ಲೈನ್ ಮೆಟ್ರೋ ಹೊರತು ಪಡಿಸಿ ಬೇರೆಡೆ ಪೀಕ್ ಅವರ್ನಲ್ಲಿ ಮೂರು ನಿಮಿಷಕ್ಕೆ ಒಂದು ಹಾಗೂ ಉಳಿದಂತೆ 10 ನಿಮಿಷಕ್ಕೆ ಒಂದರಂತೆ ಮೆಟ್ರೋಗಳು ಸಂಚಾರ ಮಾಡುತ್ತಿವೆ. ಅಂತಹ ನಿಲ್ದಾಣಗಳಲ್ಲಿ ಹೆಚ್ಚು ಹೊತ್ತು ಕಳೆದರೆ ದಂಡ ವಿಧಿಸುವುದರಲ್ಲಿ ಒಂದು ಅರ್ಥವಿದೆ ಎನ್ನಬಹುದು. ಆದರೆ ಹಳದಿ ಲೈನ್ ಮೆಟ್ರೋದಲ್ಲಿ ಸದ್ಯ ಕೇವಲ ಮೂರು ರೈಲು ಸಂಚಾರ ಮಾಡುತ್ತಿದೆ. ಒಂದು ರೈಲು ಹೋಗಿ ಇನ್ನೊಂದು ರೈಲು ಬರುವುದಕ್ಕೆ 25 ನಿಮಿಷ ಬೇಕು. ಒಂದು ವೇಳೆ ರೈಲು ಮಿಸ್ ಮಾಡಿಕೊಂಡರೇ ಮುಂದಿನ ರೈಲು ಬರುವವರೆಗೂ ಪ್ರಯಾಣಿಕ ನಿಲ್ದಾಣದ ಒಳಗೆ ಕಾಯಬೇಕು. ಹೀಗಾಗಿ ಸದ್ಯ ಹಳದಿ ಲೈನ್ನಲ್ಲಿ ಹೊಸ ರೀತಿಯ ಗೊಂದಲಗಳು ಸೃಷ್ಟಿಯಾಗುತ್ತಿದ್ದು, ಪ್ರಯಾಣಿಕರಿಗೆ ತೊಂದರೆಯುಂಟಾಗಿದೆ.
ನಾನು ಬಸ್ನಲ್ಲೇ ಪ್ರಯಾಣ ಮಾಡುತ್ತೇವೆ ಎಂದ ಪ್ರಯಾಣಿಕ
ಇನ್ನು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಮೆಟ್ರೋ ಪ್ರಯಾಣಿಕ, ಹಳದಿ ಮಾರ್ಗದಲ್ಲಿ ರೈಲು ಸಂಖ್ಯೆ ಹೆಚ್ಚಾಗುವರೆಗೂ ನಾನು ಬಸ್ನಲ್ಲೇ ಪ್ರಯಾಣ ಮಾಡುತ್ತೇವೆ ಎಂದಿದ್ದಾರೆ. ಒಂದು ಮೆಟ್ರೋ ಮಿಸ್ ಆದರೆ 25 ನಿಮಿಷ ಕಾಯಬೇಕು, ಇಲ್ಲ ಹೊರಗೆ ಹೋಗುತ್ತೇವೆ ಅಂದರೆ 50 ರೂ ದಂಡ ಪಾವತಿಸಬೇಕು. ಒಂದು ಕಡೆ ಹಳದಿ ಲೈನ್ನಲ್ಲಿ ಮೆಟ್ರೋ ರೈಲು ಅಭಾವವಿದ್ದರೆ, ಇನ್ನೊಂದೆಡೆ ಸಮಯದ ಜೊತೆ ಪ್ರಯಾಣಿಕರಿಗೆ ದಂಡ ವಿಧಿಸಲಾಗುತ್ತಿದೆ.
For More Updates Join our WhatsApp Group :
