ಬೆಂಗಳೂರು: ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇದರೊಂದಿಗೆ ನಟ ದರ್ಶನ್ ಗ್ಯಾಂಗ್ ನ ಎಲ್ಲಾ 17 ಆರೋಪಿಗಳನ್ನು ಬಂಧಿಸಿದಂತಾಗಿದೆ.
ರೇಣುಕಾಸ್ವಾಮಿ ಹತ್ಯೆ ಬಳಿಕ ನಾಪತ್ತೆಯಾಗಿದ್ದ ಪ್ರಕರಣದ ಒಂಬತ್ತನೇ ಆರೋಪಿ ರಾಜು ಅಲಿಯಾಸ್ ಧನರಾಜ್ ನನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಅವರು ಸೋಮವಾರ ತಿಳಿಸಿದ್ದಾರೆ. ಧನರಾಜ್ ಬಂಧನದ ಬಳಿಕ ರೇಣುಕಾಸ್ವಾಮಿ ಮೇಲೆ ದೈಹಿಕ ಹಲ್ಲೆ ಮಾತ್ರವಲ್ಲದೆ, ಆತನಿಗೆ ವಿದ್ಯುತ್ ಶಾಕ್ ಕೂಡ ನೀಡಿದ್ದರು ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.
33 ವರ್ಷದ ಅಭಿಮಾನಿಯ ಕೊಲೆ ಪ್ರಕರಣ ಬೆಳಕಿಗೆ ಬಂದ ಒಂದು ದಿನದ ನಂತರ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈಗ ನಾಪತ್ತೆಯಾಗಿದ್ದ ಧನರಾಜ್ ನನ್ನು ಪೊಲೀಸರು ಬಂಧಿಸಿದ್ದು, ದರ್ಶನ್ ಗೂ ತನಗೂ ನೇರ ಸಂಪರ್ಕವಿಲ್ಲ ಎಂದು ಧನರಾಜ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.