ಶಿವಮೊಗ್ಗ: ಶರಾವತಿ ಹಿನ್ನೀರಿನ ದ್ವೀಪದ ಜನರ ಆರೇಳು ದಶಕಗಳ ಕನಸು ಸೇತುವೆ ಆಗಿತ್ತು. ಸೇತುವೆ ಉದ್ಘಾಟನೆ ಆಗಿ, ಸೇತುವೆ ಮೇಲೆ ಓಡಾಟದಿಂದ ಜನರ ಕನಸು ಈಗ ನನಸಾಗಿದೆ. ಆದರೆ, ಕಳೆದ ಐದೂವರೆ ದಶಕಳಿಂದ ಜನರ ಓಡಾಟದ ಪ್ರಮುಖ ಸಂಪರ್ಕಕೊಂಡಿಯಾಗಿದ್ದ ಲಾಂಚ್ಗಳ ಓಡಾಟ ಸ್ಥಗಿತವಾಗಿದೆ. ಇದರಿಂದ ಲಾಂಚ್ ಗಳು ನೇಪಥ್ಯಕ್ಕೆ ಸಾಗುವ ದಾರಿಯಲ್ಲಿದೆ ಎನ್ನಬಹುದು.
1969 ರಲ್ಲಿ ಶರಾವತಿ ಹಿನ್ಜೀರಿಗೆ ಲಾಂಚ್ ಸೇವೆಗೆ ಬಂದವು. 1962 ರಲ್ಲಿ ಶರಾವತಿ ನದಿಗೆ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾದ ನಂತರ ಇದಕ್ಕೂ ಮೊದಲು ನಿರ್ಮಿತವಾದ ಗೇಟ್ ರಹಿತವಾದ ಹೀರೆ ಭಾಸ್ಕರ ಅಥವಾ ಮಡೆನೂರು ಡ್ಯಾಂ ಮುಳುಗಡೆಯಿತು. ಇದರಿಂದ ಹಿನ್ನೀರಿನಲ್ಲಿ ಹಲವು ಗ್ರಾಮಗಳು ಮುಳುಗಡೆಯಾದವು. ಇದರಿಂದ ತುಮರಿ, ಬ್ಯಾಕೋಡು ಹೋಬಳಿಯ 30 ಕ್ಕೂ ಅಧಿಕ ಗ್ರಾಮಗಳು ನೀರಿನಿಂದ ಆವೃತವಾದವು. ಹಲವು ಗ್ರಾಮಗಳು ಮುಳುಗಡೆಯಾದವು. ಉಳಿದ ಗ್ರಾಮಗಳಿಗೆ ಶರಾವತಿ ನೀರು ದ್ವೀಪವನ್ನಾಗಿ ಮಾಡಿದವು.

ಇದರಿಂದ ಈ ಭಾಗದ ಜನ ಸಾಗರ ಹಾಗೂ ಶಿವಮೊಗ್ಗ, ಹೊಸನಗರ ಭಾಗಗಳಿಗೆ ಹೊಂದಿದ್ದ ರಸ್ತೆಗಳು ಸಹ ಮುಳುಗಿ ಹೋದವು. ಸಂಪರ್ಕವೇ ಇಲ್ಲದೇ ದ್ವೀಪದಂತಾಗಿದ್ದ ಪ್ರದೇಶದ ಜನತೆ ಮೊದಲು ತಮ್ಮ ಸಾಗರ ಪಟ್ಟಣದ ಸವಾರಿಗೆ ತೆಪ್ಪವನ್ನು ಅವಲಂಬಿಸುವಂತಾಯಿತು. ತೆಪ್ಪ ಮಗುಚಿ ಹಲವು ದುರಂತಗಳೇ ನಡೆದು ಹೋದವು. ಹಲವು ಜೀವಗಳು ನೀರು ಪಾಲಾದವು. ನಂತರ ಎಚ್ಚೆತ್ತ ಸರ್ಕಾರಗಳು ಹಿನ್ನೀರಿನ ಜನರಿಗೆ ಮೊದಲ ಬಾರಿಗೆ 1969 ರಲ್ಲಿ ಲಾಂಚ್ ವ್ಯವಸ್ಥೆಯನ್ನು ಜಾರಿಗೆ ತಂದವು. ಅಂದಿನಿಂದ 2025 ರ ಜುಲೈ 14 ರ ತನಕ ಸುಧೀರ್ಘ ಸೇವೆ ನೀಡಿದ್ದ ಇವುಗಳು ಈಗ ಶರಾವತಿ ಹಿನ್ನೀರಿನಲ್ಲಿ ತೇಲುವುದನ್ನು ಬಂದ್ ಮಾಡಿವೆ.
ಶರಾವತಿ ಹಿನ್ನೀರಿನಲ್ಲಿ ಲಾಂಚ್ಗಳು ಬೇಡಿಕೆಗಳಿಗೆ ಅನುಗುಣವಾಗಿ ಒಂದರ ಮೇಲೆಂದು ಸೇರ್ಪಡೆಗೊಂಡು ಇದೀಗ ನಾಲ್ಕು ಲಾಂಚ್ ಗಳಿಲ್ಲಿ ಮೂರು ಸಾರ್ವಜನಿಕರ ಸೇವೆಗಿದ್ದ ಒಂದನ್ನು ಸೇತುವೆ ಕಾಮಗಾರಿ ನಡೆಸುತ್ತಿದ್ದ ಕಂಪನಿಗೆ ನೀಡಲಾಗಿತ್ತು. ಲಾಂಚ್ ನಲ್ಲಿ 3 ಜನ ಸರ್ಕಾರಿ ನೌಕರರು ಸೇರಿದಂತೆ ಹೊರಗುತ್ತಿಗೆಯಲ್ಲಿ 8 ಜನ ಇದ್ದರು. ಲೋಕೋಪಯೋಗಿ ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ನೌಕರರನ್ನು ಇಲಾಖೆಯು ಕಾರವಾರ ಸೇರಿದಂತೆ ಇತರ ಕಡೆ ಕಳುಹಿಸಿಕೊಡಬಹುದು. ಆದರೆ, ಹೊರ ಗುತ್ತಿಗೆಯಲ್ಲಿದ್ದ 8 ಜನರು ಮಾತ್ರ ಈಗ ಅತಂತ್ರರಾಗಿದ್ದಾರೆ.
ಲಾಂಚ್ ಸೇವೆ ಸ್ಥಗಿತವಾಗಿದ್ದ ಕುರಿತು ಶರಾವತಿ ಹಿನ್ನೀರಿನಲ್ಲಿ ಲಾಂಚ್ ಸೇವೆಯ ಉಸ್ತುವಾರಿ ನೋಡಿಕೊಳ್ಳುವ ಒಳನಾಡು ಜಲ ಸಾರಿಗೆ ಅಧಿಕಾರಿಯಾದ ದಾಮೋದರ್ ಅವರು ಈ ಟಿವಿ ಭಾರತ್ ಜೊತೆ ದೂರವಾಣಿಯಲ್ಲಿ ಮಾತನಾಡಿ, ಸೇತುವೆ ಉದ್ಘಾಟನೆಯಾದಾಗಿನಿಂದ ಜನ ಲಾಂಚ್ಗೆ ಬಾರದ ಕಾರಣಕ್ಕೆ ಲಾಂಚ್ ಸೇವೆ ಸ್ಥಗಿತಗೊಂಡಿದೆ. ಲಾಂಚ್ ಸೇವೆ ಸ್ಥಗಿತವಾಗಿರುವ ಕುರಿತು ಸರ್ಕಾರಕ್ಕೆ ವರದಿ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಮುಂದಿನ ತೀರ್ಮಾನ ಮಾಡಲಾಗುವುದು ಎಂದರು. ಲಾಂಚ್ ಸೇವೆಯಿಂದ ವರ್ಷಕ್ಕೆ 1.35 ಕೋಟಿ ಆದಾಯ ಬರುತ್ತಿತ್ತು. ನೌಕರರಿಗೆ ಸಂಬಳ ಇಲಾಖೆ ಕೊಡುತ್ತಿತ್ತು. ಹೊರಗುತ್ತಿಗೆರವರಿಗೆ ಗುತ್ತಿಗೆ ಪಡೆದ ಸಂಸ್ಥೆ ನೀಡುತ್ತಿತ್ತು . ಸರ್ಕಾರದ ವರದಿ ಬಂದ ಬಳಿಕ ನಾವು ಮುಂದಿನ ತೀರ್ಮಾನ ಮಾಡಲಾಗುವುದು. ಅಲ್ಲಿಯವರೆಗೂ ಲಾಂಚ್ ಸೇವೆ ಬಂದ್ ಆಗಿರುತ್ತದೆ ಎಂದು ತಿಳಿಸಿದರು.