ತುಮಕೂರು : ಸಮಗ್ರ ಕೃಷಿ ಮೂಲಕ ಮಾದರಿಯಾದ ರೈತ ಮಹಿಳೆಗೆ ಯುವ ರೈತ ಮಹಿಳೆ ಪ್ರಶಸ್ತಿ

ತುಮಕೂರು : ಸಮಗ್ರ ಕೃಷಿ ಮೂಲಕ ಮಾದರಿಯಾದ ರೈತ ಮಹಿಳೆಗೆ ಯುವ ರೈತ ಮಹಿಳೆ ಪ್ರಶಸ್ತಿ

ವರದಿ: ಮಂಜುನಾಥ್ ಎಚ್ ಆರ್, ಹಿಂಡಿಸಿಗೆರೆ

ತುಮಕೂರು : ಮಾಡುವ ಛಲವಿದ್ದರೆ ಕೃಷಿ ಏನು ಕಷ್ಟದ ಕೆಲಸವಲ್ಲ, ನಷ್ಟದ ಕೆಲಸವೂ ಅಲ್ಲ. ಸಮರ್ಪಕವಾಗಿ ಸಮಗ್ರ ಕೃಷಿಯನ್ನು ಮಾಡಿದರೆ ಲಾಸ್ ಎನ್ನುವುದು ಇಲ್ಲ, ವ್ಯವಸಾಯ ಮನೆ ಮಂದಿಯೆಲ್ಲಾ ಸಾಯ ಎನ್ನುವ ಮಾತನ್ನು ಯಾರು ಕೂಡ ಹೇಳುವುದಿಲ್ಲ. ಅದರಿಂದಲೂ ಕೂಡ ಲಾಭವನ್ನು ಗಳಿಸಬಹುದು, ನೆಮ್ಮದಿಯ ಜೀವನವನ್ನು ಕಾಣಬಹುದು ಎನ್ನುವುದಕ್ಕೆ ಶ್ರೀಮತಿ ಜಯಶ್ರೀ ಕಿರಣ್ ಅವರೇ ಸಾಕ್ಷಿ.

ಹೌದು.. ತುಮಕೂರು ಜಿಲ್ಲೆಯ ತುಮಕೂರು ತಾಲೂಕಿನ ನರಸಾಪುರದ ಶ್ರೀಮತಿ ಜಯಶ್ರೀ ಅವರು ಓದಿರುವುದು ಎಂಎಸ್ಸಿ, ಮದುವೆಗೂ ಮುನ್ನ ಕೃಷಿ ಬಗ್ಗೆ ಅವರಿಗೆ ಅಷ್ಟೇನು ತಿಳುವಳಿಕೆಯಾಗಲಿ, ಜ್ಞಾನವಾಗಲಿ ಇರಲಿಲ್ಲ. ಮದುವೆಯಾದ ನಂತರ ತಮ್ಮ ಪತಿ ಕಿರಣ್ ಮತ್ತು ಅತ್ತೆ, ಮಾವನವರು ಮಾಡುವ ಕೃಷಿಯನ್ನು ನೋಡಿ ಆಸಕ್ತಿಯಿಂದ ಕೃಷಿಯನ್ನು ಕಲಿತು ಇಂದು ಸಮಗ್ರ ಕೃಷಿಯಲ್ಲಿ ಯುವ ಜನಾಂಗಕ್ಕೆ ದಾರಿದೀಪವಾಗಿದ್ದಾರೆ.

ಸಾಮಾನ್ಯವಾಗಿ ಉನ್ನತ ಶಿಕ್ಷಣವನ್ನು ಪಡೆದ ತಕ್ಷಣವೇ ಯಾವುದೇ ಒಬ್ಬ ಯುವತಿಯಾದರೂ ನಗರದಲ್ಲಿ ಇರಬೇಕು. ನಗರದ ಜೀವನವನ್ನು ಕಳೆಯಬೇಕು. ಹಳ್ಳಿ ಜೀವನ, ಕೃಷಿ ಕಡೆ ಅಷ್ಟಾಗಿ ಆಸಕ್ತಿ ತೋರುವುದಿಲ್ಲ, ಆದರೆ ಶ್ರೀಮತಿ ಜಯಶ್ರೀ ಅವರು ಕೃಷಿ ಕಡೆ ಹೆಚ್ಚಿನ ಒಲವನ್ನು ತೋರಿಸಿ. ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಷ್ಟಕ್ಕೂ ಇವರೇನು ಕೃಷಿ ಆಧಾರಿತ ಕುಟುಂಬದಿಂದ ಬಂದವರಲ್ಲ. ತಂದೆಯು ಕೂಡ ಶಾಲೆಯ ಶಿಕ್ಷಕರಾಗಿ ಸರ್ಕಾರಿ ನೌಕರರಾಗಿದ್ದು ಕೃಷಿಯಿಂದ ಸ್ವಲ್ಪ ದೂರವೇ ಇದ್ದವರು. ಇದೀಗ ಜಯಶ್ರೀ ಅವರು ಕೃಷಿ ಕೈಹಿಡಿದಿದ್ದಾರೆ.

ಕುಟುಂಬದ ನಿರ್ವಹಣೆಯ ಜೊತೆಗೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಜಯಶ್ರೀ ಅವರು ಸಮಗ್ರ ಕೃಷಿ ಪದ್ಧತಿಗೆ ಹೆಚ್ಚು ಒತ್ತನ್ನು ನೀಡಿದ್ದಾರೆ. ಇರುವಂತಹ ತಮ್ಮ ಎರಡು 2.66 ಎಕರೆ ಜಮೀನಿನಲ್ಲಿ ಕೃಷಿ ಬೆಳೆಗಳಾದ ರಾಗಿ, ತೊಗರಿ, ಅವರೇ ಹಾಗೂ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ವೀಳ್ಯದೆಲೆ, ಕೊತಂಬರಿ ಸೊಪ್ಪು ಬೆಳೆಯುತ್ತಿದ್ದಾರೆ.

ತಮ್ಮ ತೋಟದಲ್ಲಿ ಅಂತರ ಬೆಳೆಯಾದ ಅಂಜೂರ, ಲವಂಗ, ಸುವರ್ಣ ಗೆಡ್ಡೆ, ಪರಂಗಿ, ಏಲಕ್ಕಿ, ಮೆಣಸು, ಬಾಳೆ, ಸಪೋಟ ಹಾಗೂ ಇನ್ನಿತರ ತೋಟಗಾರಿಕೆ ಬೆಳೆಗಳನ್ನು ಬೆಳೆದು ತಮ್ಮ ಕೃಷಿ ಭೂಮಿಯಲ್ಲಿ ಒಂದಿಷ್ಟು ಜಾಗ ವೇಸ್ಟ್ ಆಗದೆ ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡಿದ್ದಾರೆ.

ಇದಿಷ್ಟೇ ಮಾತ್ರವಲ್ಲ ಬದುಗಳಲ್ಲಿಯೂ ಕೂಡ ತೇಗ, ಹುಣಸೆ, ಬೇವು, ಹೆಬ್ಬೇವು ಹಾಗೂ ಸಿಲ್ವರ್ ಓಕ್ ಮರಗಳನ್ನು ಬೆಳೆದು ಅರಣ್ಯ ಕೃಷಿಗೂ ಆದ್ಯತೆ ನೀಡುತ್ತಿದ್ದಾರೆ. ಇದರ ಜೊತೆಗೆ ಕೃಷಿಯ ಉಪಕಸುಬುಗಳಾದ ಹಸು ಸಾಕಾಣಿಕೆ, ಮೇಕೆ ಸಾಕಾಣಿಕೆ, ನಾಟಿ ಕೋಳಿ, ಅಣಬೆ ಕೃಷಿ ಹಾಗೂ ಜೇನು ಸಾಕಾಣಿಕೆ ಮಾಡಿ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ತಾವು ಸಾಕಿರುವಂತಹ ಜಾನುವಾರುಗಳ ಮೇವಿಗಾಗಿ ಬದುಗಳಲ್ಲಿ ಅಗಸೆ ಹಾಗೂ ಮುಸುಕಿನ ಜೋಳ ಬೆಳೆದು ಹಸುಗಳಲ್ಲಿ ಉತ್ತಮ ಗುಣಮಟ್ಟದ ಹಾಲಿನ ಇಳುವರಿ ಹೆಚ್ಚಾಗುವಂತೆ ಮಾಡಿದ್ದಾರೆ. 

ಸಾಮಾನ್ಯವಾಗಿ ತೋಟದಲ್ಲಿ ಸಿಗುವ ತ್ಯಾಜ್ಯಗಳನ್ನು ಒಂದೆಡೆ ಹಾಕಿ ಸುಟ್ಟು ಹಾಕುವಂತ ಪರಿಪಾಠ ರೈತರಲ್ಲೇ ಇದೆ. ಆದರೆ ರೈತ ಮಹಿಳೆಯಾದ ಜಯಶ್ರೀ ಅವರು ತಮ್ಮ ತೋಟದಲ್ಲಿರುವಂತಹ ತ್ಯಾಜ್ಯಗಳನ್ನು ಬಳಸಿಕೊಂಡು ಕೊಟ್ಟಿಗೆ ಗೊಬ್ಬರ ಮಾಡಿ ತಮ್ಮ ಜಮೀನಿಗೆ ಬಳಸುವುದರ ಜೊತೆಗೆ ಲಘು ಪೋಷಕಾಂಶಗಳ ಪೂರೈಕೆ, ಹಸಿರಲೆ ಗೊಬ್ಬರ, ಎರೆಹುಳು ಗೊಬ್ಬರ ನೀಡುವ ಮೂಲಕ ಸಮಗ್ರ ಪೋಷಕಾಂಶ ನಿರ್ವಹಣೆ ಮಾಡುತ್ತಿದ್ದಾರೆ.

ಮಣ್ಣಿನ ಫಲವತ್ತತೆಯನ್ನು ಕಾಪಾಡುವುದರ ಜೊತೆಗೆ ಉತ್ಪಾದನೆ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಜೀವಾಮೃತ ಮತ್ತು ಪಂಚಗವ್ಯ ತಯಾರಿಸಿ ಗಿಡಗಳಿಗೆ ಸಿಂಪಡಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಹನಿ ನೀರಾವರಿ ಹಾಗೂ ರಸಾವರಿ ಪದ್ಧತಿ ಅಳವಡಿಸಿಕೊಂಡು ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಉತ್ತಮ ಫಸಲನ್ನು ಪಡೆಯಲು ಮಾರ್ಗೋಪಾಯಗಳನ್ನು ಅರಿತಿರುವ ಜಯಶ್ರೀ ಅವರು ಮಣ್ಣು ಮತ್ತು ನೀರು ಪರೀಕ್ಷೆ ಮಾಡಿಸುವುದು, ಬಿತ್ತನೆಗೆ ಮುನ್ನ ಬೀಜಾಮೃತ, ಬೀಜೋಪಚಾರ ಮಾಡುವ ಮೂಲಕ ಉತ್ತಮ ಫಸಲು ಅಥವಾ ಫಸಲಿನ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಸಾಂಪ್ರದಾಯಿಕ ಪದ್ಧತಿಗಳ ಜೊತೆಗೆ ಕೃಷಿಗೆ ಸಂಬಂಧಿಸಿದ ಹೊಸ ತಾಂತ್ರಿಕತೆಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಪಡೆದುಕೊಂಡು, ಸಂಘ ಸಂಸ್ಥೆಗಳಿಂದ ಮಾಹಿತಿಯನ್ನು ತೆಗೆದುಕೊಂಡು ಜೊತೆಗೆ ಸಮೂಹ ಮಾಧ್ಯಮದ ಸಹಾಯದಿಂದ ಪ್ರಾಯೋಗಿಕವಾಗಿ ಅಳವಡಿಸಿಕೊಂಡು ಅನೇಕ ರೈತರಿಗೆ ಮತ್ತು ರೈತ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಅರಿತಿರುವ ಇವರು, ಆಧುನಿಕ ಮತ್ತು ಮಿಶ್ರ ಬೇಸಾಯ ಅಥವಾ ಸಮಗ್ರ ಕೃಷಿ ಪದ್ಧತಿಗೆ ಹೆಚ್ಚು ಒತ್ತು ನೀಡಿರುವುದು ವಿಶೇಷ ಎನ್ನಬಹುದು. ಇವರ ತೋಟದಲ್ಲಿ ಪ್ರತಿಯೊಂದು ಬೆಳೆಯನ್ನು ಬೆಳೆಯಬೇಕು ಎನ್ನುವ ಉದ್ದೇಶದಿಂದ ಹೆಚ್ಚಿನ ಒತ್ತನ್ನು ನೀಡುತ್ತಿದ್ದಾರೆ.

ಸಾಮಾನ್ಯವಾಗಿ ನಮ್ಮದು ಪುರುಷ ಪ್ರಧಾನ ಸಮಾಜ ಇಂತಹ ಸಮಾಜದಲ್ಲಿ ಮಹಿಳೆಯರು ಸಾಧನೆ ಮಾಡಲು ಸಾಕಷ್ಟು ಹೋರಾಟ ನಡೆಸಬೇಕು ಮಾತ್ರವಲ್ಲದೆ ಇಂತಹ ಮಹಿಳೆಯರಿಗೆ ಉತ್ತೇಜನ ನೀಡುವವರು ಕೂಡ ಕಡಿಮೆ. ಆದರೆ ಜಯಶ್ರೀ ಅವರ ವಿಚಾರದಲ್ಲಿ ಇದು ಸಂಪೂರ್ಣವಾಗಿ ಬದಲಾಗಿದೆ. ಪತಿಯಾದ ಕಿರಣ್ ಮತ್ತು ಮಾವನವರಾದ ಅನಂತರಾಜು ಅಗ್ನಿವಂಶಿ ಹಾಗೂ ಅತ್ತೆಯವರಾದ ಗೀತಾರವರು ಉತ್ಸಾಹಿ ಜಯಶ್ರೀ ಅವರಿಗೆ ಸಂಪೂರ್ಣ ಸಹಕಾರವನ್ನು ನೀಡಿದ್ದಾರೆ. ಖುಷಿಯಲ್ಲಿ ತೊಡಗಿಸಿಕೊಂಡು ಯಾವುದೇ ಕೆಲಸವನ್ನು ಮಾಡಿದರು ಕೂಡ ಸಂತೋಷದಿಂದ ಹೆಮ್ಮೆಯಿಂದ ಹೇಳಿಕೊಡುವ ಕೆಲಸ ಮಾಡುತ್ತಾ ಬರುತ್ತಿದ್ದಾರೆ.

ಒಟ್ಟಾರೆಯಾಗಿ ಕೃಷಿಯನ್ನು ಹೇಗೆ ಮಾಡಬೇಕು ಎಂದು ಅಷ್ಟಾಗಿ ತಿಳಿಯದ ಕುಟುಂಬದಿಂದ ಬಂದು ಕೃಷಿಯ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡು ಇದೀಗ ಮಾದರಿ ಕೃಷಿ ಮಹಿಳೆಯಾಗಿ ಬೆಳೆದಿರುವಂತಹದ್ದು ನಿಜಕ್ಕೂ ಕೂಡ ಖುಷಿಯ ವಿಚಾರ.  ಇನ್ನೂ ಇವರ ಕೃಷಿ ಕ್ಷೇತ್ರದಲ್ಲಿ ಸಾಧನೆಗಾಗಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವು 2024ರ ಕೃಷಿ ಮೇಳದಲ್ಲಿ ತಾಲೂಕು ಮಟ್ಟದ ಪ್ರಗತಿಪರ ಯುವ ರೈತ ಮಹಿಳೆ ಪ್ರಶಸ್ತಿ ಹಾಗೂ 5 ಸಾವಿರ ರೂಪಾಯಿಗಳ ಬಹುಮಾನವನ್ನು ನೀಡಿ ಗೌರವಿಸಿದೆ.

Leave a Reply

Your email address will not be published. Required fields are marked *