ಝೀರೋ ಟ್ರಾಫಿಕ್​ನಲ್ಲಿ ಹಾಸನದಿಂದ ಮೈಸೂರಿಗೆ ಸಾಗಿದ ಹೃದಯ: ಸಾ*ನಲ್ಲೂ ಸಾರ್ಥಕತೆ.

ಝೀರೋ ಟ್ರಾಫಿಕ್​ನಲ್ಲಿ ಹಾಸನದಿಂದ ಮೈಸೂರಿಗೆ ಸಾಗಿದ ಹೃದಯ: ಸಾ*ನಲ್ಲೂ ಸಾರ್ಥಕತೆ.

ಅಪ*ತದಲ್ಲಿ ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ.

ಹಾಸನ: ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದ ಯುವಕ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಬಳಿಕ, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಪೋಷಕರು ಮಗನ ಹೃದಯ, ಲಿವರ್, ಕಣ್ಣು ಸೇರಿದಂತೆ ಅಂಗಾಂಗಗಳನ್ನು ದಾನ ಮಾಡಿ ಹಲವರ ಜೀವ ಉಳಿಸಿದ ಹೃದಯಸ್ಪರ್ಶಿ ವಿದ್ಯಮಾನಕ್ಕೆ ಹಾಸನ ಜಿಲ್ಲೆ ಸಾಕ್ಷಿಯಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಾಗತವಳ್ಳಿ ಗ್ರಾಮದ ಲೋಕೇಶ್ (35) ಅವರು ಡಿಸೆಂಬರ್ 11ರಂದು ಮನೆಗೆ ದಿನಸಿ ಸಾಮಾನು ತರಲೆಂದು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಆನೆಕೆರೆ ಸಮೀಪ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದರು. ತಲೆಗೆ ಗಂಭೀರ ಗಾಯಗೊಂಡಿದ್ದ ಲೋಕೇಶ್ ಅವರನ್ನು ಸ್ಥಳೀಯರು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹಿಮ್ಸ್ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಗನ ಜೀವ ಉಳಿಸಿಕೊಳ್ಳಲು ತಂದೆ-ತಾಯಿ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಸಾಲ ಮಾಡಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದರೂ ಲೋಕೇಶ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿರಲ್ಲ. ಕೊನೆಗೆ ಅವರನ್ನು ಬೆಂಗಳೂರಿನಿಂದ ಹಾಸನದ ಹಿಮ್ಸ್ ಆಸ್ಪತ್ರೆಗೆ ಮತ್ತೆ ಕರೆತರಲಾಯಿತು. ಲೋಕೇಶ್ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಪೋಷಕರಿಗೆ ತಿಳಿಸಿದರು. ಎಲ್ಲ ಪ್ರಯತ್ನಗಳೂ ಫಲಿಸದ ಹಿನ್ನೆಲೆಯಲ್ಲಿ ಲೋಕೇಶ್ ಬದುಕುಳಿಯುವ ಸಾಧ್ಯತೆ ಇಲ್ಲವೆಂದು ಖಚಿತವಾದಾಗ, ಪೋಷಕರು ಕಠಿಣ ನಿರ್ಧಾರ ಕೈಗೊಂಡರು.

ಮಗನ ದೇಹ ಮಣ್ಣಾಗುವ ಬದಲು ಇತರರ ಜೀವ ಉಳಿಸಲಿ ಎಂಬ ಉದಾತ್ತ ಮನೋಭಾವದಿಂದ ಲೋಕೇಶ್ ಅವರ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ರಾಜ್ಯ ಅಂಗಾಂಗ ದಾನ ಸಂಸ್ಥೆಗೆ ಮಾಹಿತಿ ನೀಡಲಾಗಿದ್ದು, ಬೆಂಗಳೂರಿನಿಂದ ಆಗಮಿಸಿದ ತಜ್ಞರ ತಂಡ ಪರಿಶೀಲನೆ ನಡೆಸಿದ ಬಳಿಕ, ಹೃದಯ, ಲಿವರ್ ಹಾಗೂ ಇತರೆ ಅಂಗಾಂಗಗಳನ್ನು ಯಶಸ್ವಿಯಾಗಿ ಪಡೆದುಕೊಳ್ಳಲಾಯಿತು.

ಹಾಸನದಿಂದ ಮೈಸೂರಿಗೆ ಝೀರೋ ಟ್ರಾಫಿಕ್​ನಲ್ಲಿ ಸಾಗಿದ ಹೃದಯ

ಲೋಕೇಶ್ ಅವರ ಜೀವಂತ ಹೃದಯವನ್ನು ಹಾಸನದಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ರವಾನಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸರು ಆರೋಗ್ಯ ಇಲಾಖೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಸಮಯಕ್ಕೆ ಸರಿಯಾಗಿ ಅಂಗಾಂಗ ರವಾನೆ ಸಾಧ್ಯವಾಗುವಂತೆ ನೆರವು ನೀಡಿದರು. ಹಿಮ್ಸ್ ವೈದ್ಯರು ಈ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಊರಿಗೆ ಮರಳಿದ್ದ ಲೋಕೇಶ್

ಲೋಕೇಶ್ ಅವರು ಮದುವೆಯ ಬಳಿಕ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದು, ಕೊರೊನಾ ಸಂದರ್ಭದಲ್ಲಿ ಊರಿಗೆ ಮರಳಿದ್ದರು. ನಂತರ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಒಂದು ಕ್ಷಣದ ಅಪಘಾತ ಅವರ ಬದುಕನ್ನೇ ಕಸಿದುಕೊಂಡಿತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *