ಚಾಮರಾಜನಗರದಲ್ಲಿ ಅಪರೂಪದ ಘಟನೆ
ಚಾಮರಾಜನಗರ : ಕಾಡಿನ ಕ್ರೂರ ಬೇಟೆಗಾರ ಚಿರತೆಯೊಂದು ತನ್ನ ಆಹಾರಕ್ಕಾಗಿ ನಡೆಸಿದ ಪ್ರಯತ್ನವೇ ಅದಕ್ಕೆ ಮುಳುವಾದ ಘಟನೆ ಗುಂಡ್ಲುಪೇಟೆ ತಾಲೂಕಿನ ರಂಗನಬೆಟ್ಟದಲ್ಲಿ ನಡೆದಿದೆ. ಕಾಡಿನಲ್ಲಿ ಪ್ರಾಣಿಗಳ ನಡುವೆ ಕಾದಾಟ ಉಂಟಾಗುವುದು ಸಹಜ, ಹುಲಿ, ಸಿಂಹ, ಚಿರತೆಗಳು ಹಾಗೂ ಆನೆಗಳ ಮೇಲೆ ಅಷ್ಟೊಂದು ಸುಲಭದಲ್ಲಿ ದಾಳಿ ಮಾಡಲು ಸಾಧ್ಯವಿಲ್ಲ. ಆದರೆ ಇದೀಗ ಚಿಕ್ಕ ಮುಳ್ಳುಹಂದಿಯೊಂದು ಚಿರತೆಯನ್ನು ಸೋಲಿಸಿ, ಕೊಂದಿದೆ. ಮುಳ್ಳುಹಂದಿಯನ್ನು ಬೇಟೆಯಾಡಲು ಹೋದ ಚಿರತೆಯು, ಹಂದಿಯ ತೀಕ್ಷ್ಣವಾದ ಮುಳ್ಳಿನೇಟಿಗೆ ಸಿಲುಕಿ ವಿಲವಿಲನೆ ಒದ್ದಾಡಿ ಪ್ರಾಣ ಬಿಟ್ಟಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ರಂಗನಬೆಟ್ಟದಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಹಸಿವಿನಿಂದಿದ್ದ ಚಿರತೆಯೊಂದು ಮುಳ್ಳುಹಂದಿಯನ್ನು ಕಂಡ ಕೂಡಲೇ ಅದರ ಮೇಲೆರಗಿದೆ. ಆದರೆ, ತನ್ನ ರಕ್ಷಣೆಗಾಗಿ ಮುಳ್ಳುಹಂದಿ ‘ರಿವರ್ಸ್ ಅಟ್ಯಾಕ್’ ಮಾಡಿದಾಗ, ಅದರ ಮೈಮೇಲಿದ್ದ ಉದ್ದನೆಯ ಮತ್ತು ಚೂಪಾದ ಮುಳ್ಳುಗಳು ಚಿರತೆಯ ಎದೆಯ ಭಾಗಕ್ಕೆ ಬಲವಾಗಿ ತಾಕಿವೆ.
ಇಂದು ಬೆಳಿಗ್ಗೆ ಫಾರೆಸ್ಟ್ ವಾಚರ್ಸ್ ಬೀಟ್ ಹೋಗಿದ್ದಾಗ ಚಿರತೆಯ ಶವ ಪತ್ತೆಯಾಗಿದೆ. ಪಶುವೈದ್ಯರು ಸ್ಥಳದಲ್ಲೇ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಹೊರಬಂದಿದೆ. ಮುಳ್ಳುಹಂದಿಯ ಮುಳ್ಳು ಚಿರತೆಯ ಎದೆಯ ಮೂಲಕ ನೇರವಾಗಿ ಹೃದಯಕ್ಕೆ ತಗುಲಿದೆ. ಇದರಿಂದಾಗಿ ತೀವ್ರವಾದ ಆಂತರಿಕ ರಕ್ತಸ್ರಾವ ಉಂಟಾಗಿ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
For More Updates Join our WhatsApp Group :




