ನೆಲಮಂಗಲದಲ್ಲಿ ಗಾಜು ಒಡೆದು ಕಾರಿನ ಬ್ಯಾಗ್ ಕಳ್ಳತನ
ನೆಲಮಂಗಲ : ಪತ್ನಿಯ ಚಿಕಿತ್ಸೆಗೆಂದು ಸಂಗ್ರಹಿಸಿದ್ದ ಸಾಲದ ಹಣವನ್ನೇ ಕಳ್ಳರು ದೋಚಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜಿಎಸ್ ಆಸ್ಪತ್ರೆ ಬಳಿ ನಡೆದಿದೆ. ಚಿಕ್ಕಬಾಣವರ ನಿವಾಸಿ ಹೇಮಣ್ಣ ಎಂಬುವವರು ತಮ್ಮ ಪತ್ನಿ ಅನಸೂಯ ಅವರಿಗೆ ಅನಾರೋಗ್ಯ ಹಿನ್ನೆಲೆ ನಗರೂರು ಸಮೀಪದ ಬಿಜಿಎಸ್ ಆಸ್ಪತ್ರೆಗೆ ಆಯುರ್ವೇದ ಚಿಕಿತ್ಸೆಗಾಗಿ ತೆರಳಿದ್ದರು. ಚಿಕಿತ್ಸೆಗಾಗಿ ಹಾಗೂ ಮತ್ತೊಬ್ಬರಿಗೆ ಹಣ ನೀಡಬೇಕಿದ್ದ ಕಾರಣ ಹೇಮಣ್ಣ ಸುಮಾರು ಎರಡು ಲಕ್ಷ ಐವತ್ತು ಸಾವಿರ ರೂಪಾಯಿ ಸಾಲ ಪಡೆದು ಕಾರಿನ ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದರು. ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ವಾಪಸ್ ಬರುವಷ್ಟರಲ್ಲಿ ದುಷ್ಕರ್ಮಿಗಳು ಕಾರಿನ ಗ್ಲಾಸ್ ಒಡೆದು ನಗದು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.
For More Updates Join our WhatsApp Group :




