ಮಧ್ಯಪೂರ್ವದಲ್ಲಿ ಉದ್ವಿಗ್ನತೆ ತೀವ್ರ
ನವದೆಹಲಿ : ಇರಾನ್ ಮೇಲೆ ಯುದ್ಧ ಆರಂಭವಾಗಿದೆ. ಇಸ್ರೇಲ್ ರಕ್ಷಣಾ ಸಚಿವರು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಇರಾನ್ ಮೇಲೆ ದಾಳಿ ಆರಂಭಿಸಿದ್ದೇವೆ ಎಂದು ಘೋಷಿಸಿದ್ದಾರೆ. ಇಷ್ಟು ದಿನ ಇಸ್ರೇಲ್ಗೆ ಬಾಹ್ಯ ಬೆಂಬಲ ನೀಡುತ್ತಿದ್ದ ಅಮೆರಿಕ ಇದೀಗ ನೇರವಾಗಿಯೇ ಅಖಾಡಕ್ಕಿಳಿದಿದೆ. ಹೀಗಾಗಿ, ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ನ ಯುದ್ಧ ಆರಂಭವಾಗಿದೆ. ಇದು ಜಗತ್ತಿನಲ್ಲಿ ನಡೆಯುತ್ತಿರುವ ಮೂರನೇ ಯುದ್ಧವಾಗಿದೆ. ರಷ್ಯಾ ಮತ್ತು ಉಕ್ರೇನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಯುದ್ಧ ನಡೆಯುತ್ತಿರುವಾಗಲೇ ಇರಾನ್ ಮೇಲಿನ ಯುದ್ಧ ಕೂಡ ಆರಂಭವಾಗಿದೆ.
ವಿಶೇಷವೆಂದರೆ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಭಾರತ ರಷ್ಯಾದ ಪರವಾಗಿದ್ದರೆ ಅಮೆರಿಕ ಉಕ್ರೇನ್ ಪರವಾಗಿದೆ. ಹಾಗೆಂದು ಭಾರತವೇನೂ ತಾನು ಉಕ್ರೇನ್ ವಿರುದ್ಧವೆಂದು ಹೇಳಿಕೊಂಡಿಲ್ಲ. ಭಾರತ ಕೂಡ ಉಕ್ರೇನ್ ಜೊತೆಗೆ ಉತ್ತಮ ಸಂಬಂಧ ಹೊಂದಿದೆ, ಶಾಂತಿಯುತವಾದ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ಕರೆ ನೀಡುತ್ತಲೇ ಇದೆ. ಆದರೂ ಉಕ್ರೇನ್ಗೆ ಹೋಲಿಸಿದರೆ ರಷ್ಯಾದ ನಾಯಕ ಪುಟಿನ್ ಜೊತೆ ಮೋದಿ ಹೆಚ್ಚು ಆಪ್ತ ಸಂಬಂಧ ಹೊಂದಿದ್ದಾರೆ. ಇದೇ ಕಾರಣದಿಂದಾಗಿ ಭಾರತ ಅಮೆರಿಕದ ಕೆಂಗಣ್ಣಿಗೆ ತುತ್ತಾಗಿತ್ತು.
ಇನ್ನು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಯುದ್ಧದಲ್ಲೂ ಭಾರತ ಅಫ್ಘಾನಿಸ್ತಾನದ ಪರವಾಗಿದೆ. ಅಮೆರಿಕ ಪಾಕಿಸ್ತಾನದ ಪರವಾಗಿದೆ. ಇದನ್ನೂ ಕೂಡ ಭಾರತ ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೂ ಅಫ್ಘಾನಿಸ್ತಾನದ ನಾಯಕರ ಜೊತೆ ಪ್ರಧಾನಿ ಮೋದಿ ಉತ್ತಮ ಸಂಬಂಧ ಹೊಂದಿದ್ದಾರೆ, ಟ್ರಂಪ್ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದಾರೆ. ಈ ಎರಡೂ ಯುದ್ಧಗಳಲ್ಲಿ ಭಾರತ ವಿಶ್ವದ ದೊಡ್ಡಣ್ಣನಾದ ಅಮೆರಿಕದ ವಿರುದ್ಧ ನಿಂತಿದೆ. ಆದರೆ, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಲ್ಲಿ ಭಾರತ ಮತ್ತು ಅಮೆರಿಕವೆರಡೂ ಒಟ್ಟಾಗಿ ಇಸ್ರೇಲ್ಗೆ ಬೆಂಬಲ ನೀಡುತ್ತಿವೆ. ಇರಾನ್ ಪರವಾಗಿರುವ ದೇಶಗಳ ಸಂಖ್ಯೆ ಬಹಳ ಕಡಿಮೆಯಿದೆ.
For More Updates Join our WhatsApp Group :




