ನವದೆಹಲಿ: ಭಾರತದ ಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿಯ ಸಂಗ್ರಹವು ಜುಲೈನಲ್ಲಿ ಶೇ.10.3 ರಷ್ಟು ಏರಿಕೆಯಾಗಿ 1.82 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಕೇಂದ್ರ ಹಣಕಾಸು ಇಲಾಖೆಯಿಂದ ಗುರುವಾರ ಬಿಡುಗಡೆಯಾದ ಅಧಿಕೃತ ಅಂಕಿ ಅಂಶಗಳ ಪ್ರಕಾರ ತಿಳಿದು ಬಂದಿದೆ.
ಹಿಂದಿನ ತಿಂಗಳು 1.74 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹವಾಗಿದ್ದರೆ, ಈ ಬಾರಿ ಶೇ 10ರಷ್ಟು ಹೆಚ್ಚಳವಾಗಿದ್ದು, ಬರೋಬ್ಬರಿ 1.82ಲಕ್ಷ ಕೋಟಿ ರೂಗಳಿಗೆ ಏರಿಕೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳ ಒಟ್ಟು GST ಸಂಗ್ರಹ 7.39 ಲಕ್ಷ ಕೋಟಿಯಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ 10.2 ರಷ್ಟು ಜಿಗಿತ ಕಂಡಿದೆ.
ಜುಲೈನಲ್ಲಿ ದೇಶೀಯ ಸಂಗ್ರಹಣೆಗಳು ಶೇಕಡಾ 8.9 ರಷ್ಟು ಏರಿಕೆಯಾಗಿದ್ದು, ಆಮದುಗಳಿಂದ ಜಿಎಸ್ಟಿ ಆದಾಯವು ಶೇಕಡಾ 14.2 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಮತ್ತೊಂದೆಡೆ, ಅಧಿಕಾರಿಗಳು ಕ್ಲೈಮ್‌ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿರುವುದರಿಂದ ಮರುಪಾವತಿಗಳು ಹಿಂದಿನ ವರ್ಷದ ಅದೇ ಅವಧಿಗಿಂತ 19 ಪ್ರತಿಶತ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.
ಒಟ್ಟು 16,283 ಕೋಟಿ ರೂಪಾಯಿ ಮರುಪಾವತಿಯಲ್ಲಿ 11,566 ಕೋಟಿ ರೂಪಾಯಿ ಸಮಗ್ರ ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದೆ. 1.66 ಲಕ್ಷ ಕೋಟಿಗಳಲ್ಲಿ ನಿವ್ವಳ ದೇಶೀಯ ಆದಾಯವು ಕಳೆದ ಜುಲೈನ ರೂ 1.45 ಲಕ್ಷ ಕೋಟಿಗಿಂತ 14.4 ಶೇಕಡಾ ಹೆಚ್ಚಾಗಿದೆ. ದೇಶದ ದೃಢವಾದ ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚಿನ ತೆರಿಗೆ ಅನುಸರಣೆಯನ್ನು ಪ್ರತಿಬಿಂಬಿಸುವ GST ಸಂಗ್ರಹಣೆ ಸ್ಥಿರವಾಗಿ ಏರುತ್ತಿವೆ ಮತ್ತು ಏಪ್ರಿಲ್‌ನಲ್ಲಿ ದಾಖಲೆಯ 2.1 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು.
ಜುಲೈ 23 ರಂದು ಹಣಕಾಸು ಸಚಿವೆ ನಿರಾಮಲಾ ಸೀತಾರಾಮನ್ ಅವರು ಮಂಡಿಸಿದ 2024-25ರ ಕೇಂದ್ರ ಬಜೆಟ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಸಂಗ್ರಹಣೆಯಲ್ಲಿ ಶೇಕಡಾ 11 ರಷ್ಟು ಬೆಳವಣಿಗೆಯ ಗುರಿಯನ್ನು ಹೊಂದಿದೆ ಎಂದು ಪ್ರಕಟಿಸಿದ್ದರು. ಹಣಕಾಸು ಸಚಿವರು ಜಿಎಸ್‌ಟಿ ಆಡಳಿತವು ಸ್ವಾತಂತ್ರ್ಯಾ ನಂತರದ ಅತ್ಯಂತ ದೂರಗಾಮಿ ತೆರಿಗೆ ಸುಧಾರಣೆಯ ಕ್ರಮ ಎಂದು ಬಣ್ಣಿಸಿದ್ದರು, ಜಿಎಸ್ಟಿ ನೀತಿಯು ಅದ್ಭುತ ಯಶಸ್ಸು ಕಂಡಿದೆ ಎಂದು ಸಹ ಅವರು ಹೇಳಿದ್ದರು.