ಚಿತ್ರಮಂದಿರಗಳಲ್ಲಿ ಬಹುತಾರಾಗಣದ ‘ಕಲ್ಕಿ 2898 ಎಡಿ’ ಪ್ರದರ್ಶನ ಮುಂದುವರಿಸಿದೆ. ಮೊದಲ ವಾರದಲ್ಲಿ ಧೂಳೆಬ್ಬಿಸಿದ್ದ ಚಿತ್ರದ ಅಂಕಿ-ಅಂಶವೀಗ ತೀರಾ ಸಾಧಾರಣವಾಗಿದೆ. ಖ್ಯಾತ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಬಾಲಿವುಡ್ ಬಹುಬೇಡಿಕೆ ತಾರೆಯರಾದ ಅಮಿತಾಭ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಹಲವು ಖ್ಯಾತ ನಟರು ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಸಂಪಾದನೆ ವಿಚಾರದಲ್ಲಿ ಜಾಗತಿಕವಾಗಿ ಸಿನಿಮಾ ಸಾವಿರ ಕೋಟಿ ರೂ.ನ ಸನಿಹಕ್ಕೆ ಬಂದಿದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಮಂಗಳವಾರ ಚಿತ್ರ ಶೇ.13ರಷ್ಟು ಕುಸಿತ ಕಂಡಿದೆ. ಕಳೆದ ದಿನ, 9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 529.45 ರೂಪಾಯಿ ನಿವ್ವಳ ಕಲೆಕ್ಷನ್ ಮಾಡಿದೆ.
ಚಿತ್ರದ ತೆಲುಗು ಆವೃತ್ತಿ ಈವರೆಗೆ 250.25 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹಿಂದಿ ವರ್ಷನ್ 224.65 ಕೋಟಿ ರೂ. ಗಳಿಸಿದ್ದು, ತಮಿಳು ಮತ್ತು ಕನ್ನಡದಲ್ಲಿ ಕ್ರಮವಾಗಿ 31 ಕೋಟಿ ರೂ. ಮತ್ತು 4.25 ಕೋಟಿ ರೂ. ಸಂಪಾದನೆಯಾಗಿದೆ. ಇನ್ನೂ, ಮಲಯಾಳಂ ಆವೃತ್ತಿ 19.3 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಜುಲೈ 8ರ ಹೊತ್ತಿಗೆ ವಿಶ್ವಾದ್ಯಂತ 900 ಕೋಟಿ ರೂ. ಕಲೆಕ್ಷನ್ ಮಾಡಿರುವ ಸಿನಿಮಾದ ಸದ್ಯದ ಗಳಿಕೆಯ ಮಾಹಿತಿಯನ್ನು ಚಿತ್ರ ತಯಾರಕರಿನ್ನೂ ಬಹಿರಂಗಪಡಿಸಿಲ್ಲ. ಉತ್ತರ ಅಮೆರಿಕಾದಲ್ಲಿ ಸಿನಿಮಾ ಸಖತ್ ಸದ್ದು ಮಾಡಿತ್ತು, ಬಾಕ್ಸ್ ಆಫೀಸ್ ವಿಚಾರವೂ ಉತ್ತಮವಾಗಿ ನಡೆದಿದೆ. ಅಲ್ಲಿ ಅತಿ ಹೆಚ್ಚು ಹಣ ಗಳಿಸಿರುವ ದಕ್ಷಿಣ ಭಾರತೀಯ ಚಲನಚಿತ್ರವಾಗಿ ಕಲ್ಕಿ ಹೊರಹೊಮ್ಮಿದೆ. ಅಲ್ಲಿ $16.2 ಮಿಲಿಯನ್ ವ್ಯವಹಾರ ನಡೆಸಿದೆ ಎಂಬ ಮಾಹಿತಿ ಇದೆ