ಡೆಂಗ್ಯೂ ಪಾಸಿಟಿವ್ ಬಂದವರ ಮೇಲೆ 14 ದಿನಗಳವರೆಗೆ ನಿಗವಹಿಸಿ  – ಆರೋಗ್ಯ ಸಚಿವ

ಡೆಂಗ್ಯೂಗೆ ತುತ್ತಾದ ಪ್ರತಿಯೊಬ್ಬರ ಮೇಲೆ 14 ದಿನಗಳ ವರೆಗೆ ನಿಗಾ ವಹಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಂಗಳೂರಿನ ಯಲಹಂಕದ ದಲ್ಲಿ ಇಂದು ಡೆಂಗ್ಯೂ ಹಾಟ್ ಸ್ಪಾಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಡೆಂಗ್ಯೂ ನಿಯಂತ್ರಣ ವಿಚಾರದಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದರು.

ಯಲಹಂಕದ ಶಿಂಗೇನಹಳ್ಳಿಯಲ್ಲಿ ಇಂದು ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಸ್ಥಳೀಯ ಶಾಲೆಗಳಿಗೆ ತೆರಳಿ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಿದರು. ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಚಿವರು ಡೆಂಗ್ಯೂ ನಿಯಂತ್ರಣ ವಿಚಾರದಲ್ಲಿ ಆರೋಗ್ಯ ಇಲಾಖೆ ಸತತ ಪ್ರಯತ್ನಗಳನ್ನ ಮುಂದುವರಿಸಿದೆ. ಮುಂದಿನ ತಿಂಗಳಿನಿಂದ ಡೆಂಗ್ಯೂ ಪ್ರಕರಣಗಳಲ್ಲಿ ಇಳಮುಖ ಕಾಣುವ ನೀರಿಕ್ಷೆ ಹೊಂದಿದ್ದೇವೆ ಎಂದರು.

ಕೆಲವು ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಇಳಿಮುಖವಾಗಿವೆ. ರಾಜ್ಯದ ಒಟ್ಟು ಡೆಂಗ್ಯೂ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿಯೇ ಶೇ 50 ರಷ್ಟು ಡೆಂಗ್ಯೂ ಪ್ರಕರಣಗಳಿವೆ. ಹೀಗಾಗಿ ಬೆಂಗಳೂರಿನಲ್ಲಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ವಿನ ಗಮನ ಹರಿಸಿ ಡೆಂಗ್ಯೂ ಹತೋಟಿಗೆ ತರುವಂತೆ ಸೂಚಿಸಿದ್ದೇನೆ ಎಂದರು. 10 ಜಿಲ್ಲೆಗಳ ಡೆಂಗ್ಯೂ ಹಾಟ್ ಸ್ಪಾಟ್ ಗಳಿಗೆ ಉಪನಿರ್ದೇಶಕರ ಮಟ್ಟದ ಅಧಿಕಾರಿಗಳನ್ನ ಕಳುಹಿಸಿಕೊಡಲಾಗುತ್ತಿದೆ.

ಸೋಮವಾರ ಹಾಗೂ ಮಂಗಳವಾರ ಅಧಿಕಾರಿಗಳು ಹಾಟ್ ಸ್ಪಾಟ್ ಗಳಿಗೆ ಭೇಟಿ ನೀಡಿ ಡೆಂಗ್ಯೂ ನಿಯಂತ್ರಣ ಕ್ರಮಗಳ ಅನುಷ್ಠಾನ ಆಗಿರುವ ಬಗ್ಗೆ ವಿಶೇಷ ಗಮನ ಹರಿಸಲಿದ್ದಾರೆ. ಎರಡಕ್ಕಿಂತ ಹೆಚ್ಚು ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ಗೋಚರಿಸಿದರೆ ಡೆಂಗ್ಯೂ ಹಾಟ್ ಸ್ಪಾಟ್ ಎಂದು ಗುರುತಿಸಲಾಗುತ್ತಿದೆ. ಹೆಚ್ಚಿನ ಪ್ರಕರಣಗಳು ಕಂಡುಬಂದರೆ ಅಲ್ಲಿ ಫೀವರ್ ಕ್ಲಿನಿಕ್ ಗಳನ್ನ ತೆರೆದು, ಜ್ವರ ಕಾಣಿಸಿಕೊಳ್ಳುವ ಎಲ್ಲರನ್ನ ಡೆಂಗ್ಯೂ ಟೆಸ್ಟಿಂಗ್ ಗೆ ಒಳಪಡಿಸಲಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Leave a Reply

Your email address will not be published. Required fields are marked *