ಕೊಝಿಕ್ಕೋಡ್ (ಕೇರಳ): ಮೆದುಳು ತಿನ್ನುವ ಅಮೀಬಾಗೆ ಮತ್ತೊಬ್ಬ ಬಾಲಕ ಬಲಿಯಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಎಂಬ ಅಪರೂಪದ ಮೆದುಳು ಸೋಂಕಿಗೆ 14 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಬುಧವಾರ ರಾತ್ರಿ 11.20ಕ್ಕೆ ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ಕೇರಳ ಆರೋಗ್ಯ ಇಲಾಖೆ ತಿಳಿಸಿದೆ.
ಕಳೆದೆರಡು ತಿಂಗಳಲ್ಲಿ ದಾಖಲಾದ ಮೂರನೇ ಪ್ರಕರಣ ಇದಾಗಿದೆ. ಮೇ 21ರಂದು ಮಲಪ್ಪುರಂನಲ್ಲಿ ಐದು ವರ್ಷದ ಬಾಲಕಿ ಸಾವನ್ನಪ್ಪಿದ್ದಳು. ಎರಡನೇ ಪ್ರಕರಣ ಕಣ್ಣೂರಿನಲ್ಲಿ ಘಟಿಸಿದ್ದು, ಈ ಅಪರೂಪದ ಮೆದುಳು ಸೋಂಕಿನಿಂದ 13 ವರ್ಷದ ಬಾಲಕಿ ಜೂನ್ 25ರಂದು ಮೃತಪಟ್ಟಿದ್ದಳು.
ನಿಂತ ಮಲಿನ ನೀರಿನಲ್ಲಿ ವಾಸಿಸುವ ಜೀವಂತ ಅಮಿಬಾಗಳು ಮೂಗಿನ ಮೂಲಕ ವ್ಯಕ್ತಿ ದೇಹ ಹೊಕ್ಕು ಅದು ಮೆದುಳು ಸೋಂಕಿಗೆ ಕಾರಣವಾಗುತ್ತದೆ. ಈ ಹಿನ್ನೆಲೆ ಸಣ್ಣ ಕೊಳದಂತಹ ಪ್ರದೇಶದಲ್ಲಿ ಮಕ್ಕಳು ಇಳಿಯುವ ಮುನ್ನ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ.
ವೈದ್ಯಕೀಯ ತಜ್ಞರ ಪ್ರಕಾರ, ಮುಕ್ತವಾಗಿ ಜೀವಿಸುವ ಪರಾವಲಂಬಿಯಲ್ಲದ ಅಮೀಬಾ ಬ್ಯಾಕ್ಟೀರಿಯಾ ಇದಾಗಿದ್ದು, ಇವು ಮಾರಣಾಂತಿಕವಾಗಿದೆ. ಈ ಹಿನ್ನೆಲೆ ಜನರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಎಚ್ಚರಿಸಿದ್ದಾರೆ.
ಈ ಮೊದಲು 2017ರಲ್ಲಿ ಪತ್ತೆಯಾಗಿತ್ತು. ಇದಾದ ಬಳಿಕ 2023ರಲ್ಲಿ ಅಲ್ಲಪುಳಂನ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಅಪರೂಪವಾಗಿದ್ದು, ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದು ಮುಕ್ತ ಜೀವಂತ ಅಮೀಬಾ ಆಗಿರುವ ನೈಗ್ಲೇರಿಯಾ ಫೌಲೇರಿದಿಂದ ಉಂಟಾಗುತ್ತದೆ. ಇದನ್ನು ತಾಜಾ ನೀರಿನ ಸೆಲೆಗಳಾದ, ಕೆರೆ, ನದಿಗಳಲ್ಲೂ ಕಾಣಬಹುದಾಗಿದೆ. ಈ ಸೋಂಕು ತಗುಲಿದ ವಾರದೊಳಗೆ ಇದರ ಲಕ್ಷಣಗಳಾದ ಕುತ್ತಿಗೆ ನೋವು, ಸೀನುವಿಕೆ, ಗೊಂದಲ, ಭ್ರಮೆ ಮತ್ತು ವ್ಯಕ್ತಿತ್ವ ಬದಲಾವಣೆ, ಫೋಟೋಫೋಬಿಯಾ, ಸಮತೋಲನ ನಷ್ಟಗಳು ಕಾಣಿಸಿಕೊಳ್ಳುತ್ತವೆ. ಇವು ಆರಂಭಿಕ ಹಂತದಲ್ಲಿ ಪತ್ತೆಯಾಗದಿದ್ದರೆ, ಕೋಮಾ, ಮೆದುಳಿನ ಊತ ಮತ್ತು ಸಾವಿಗೆ ಕಾರಣವಾಗುತ್ತವೆ.