ಆಂಧ್ರಪ್ರದೇಶ: ಭಾರತಾದ್ಯಂತ ಅತ್ಯಂತ ಅದ್ದೂರಿಯಾಗಿ ಆಚರಿಸುವ ಹಬ್ಬಗಳ್ಳಲ್ಲಿ ವಿಶೇಷವಾದ ಹಬ್ಬವೆಂದರೆ ಅದುವೇ ಗಣೇಶ ಹಬ್ಬ, ಹಳ್ಳಿಯಿಂದ ದಿಲ್ಲಿಯ ವರೆಗೆ ಬೀದಿ ಬೀದಿಗಳಲ್ಲಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತೆ.
ಇನ್ನು ಗಣೇಶನನ್ನು ಕೂರಿಸುವ ಮಂಟಪಕ್ಕೆ ಅದ್ದೂರಿಯಾಗಿ ಅಲಂಕಾರ ಮಾಡಲಾಗಿದೆ. ಆದರೆ, ಎಲ್ಲದಕ್ಕಿಂತ ಭಿನ್ನವಾಗಿ ಆಂಧ್ರಪ್ರದೇಶದ NTR ಜಿಲ್ಲೆಯ ನಂದಿಗಾಮದ ವಾಸವಿ ಮಾರುಕಟ್ಟೆ ಬಳಿ ಪ್ರತಿಷ್ಠಾಪಿಸಿರುವ ಗಣೇಶಮೂರ್ತಿ ಮಂಟಪವನ್ನು 2 ಕೋಟಿ 70 ಲಕ್ಷ ರೂಪಾಯಿ ಮೌಲ್ಯ ನೋಟುಗಳಿಂದ ಸಿಂಗರಿಸಲಾಗಿದೆ.
42ನೇ ಗಣೇಶೋತ್ಸವದ ಪ್ರಯುಕ್ತ ರಾಜ ದರ್ಬಾರ್ ಗಣಪತಿ ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಗಣೇಶ ಚತುರ್ಥಿ ಆಚರಿಸಿದ್ದಾರೆ. ಇದರ ಭಾಗವಾಗಿ ಶುಕ್ರವಾರ ವಿವಿಧ ಮುಖಬೆಲೆಯ 2 ಕೋಟಿ 70 ಲಕ್ಷ ರೂಪಾಯಿ ಹಣದಿಂದ ಗಣೇಶ ಸೇರಿದಂತೆ ಇಡೀ ಮಂಟಪವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಈ ವಿಭಿನ್ನ ಅಲಂಕಾರ ಕಾಣ್ತುಂಬಿಕೊಳ್ಳಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
ಮತ್ತೊಂದೆಡೆ, ಗುಂಟೂರು ಜಿಲ್ಲೆಯ ಮಂಗಳಗಿರಿಯ ಪ್ರಮುಖ ಬೀದಿಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶಮೂರ್ತಿಯನ್ನು 2 ಕೋಟಿ 30 ಲಕ್ಷ ರೂಪಾಯಿಗಳ ಕರೆನ್ಸಿ ನೋಟುಗಳಿಂದ ಅಲಂಕರಿಸಲಾಗಿದೆ. ಇದಕ್ಕಾಗಿ 10, 20, 50, 100, 200, 500 ಮುಖಬೆಲೆಯ ನೋಟುಗಳನ್ನು ಬಳಸಲಾಗಿದೆ. ಸಚಿವ ನಾರಾ ಲೋಕೇಶ್ ಅವರು ಈ ಕರೆನ್ಸಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.