ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಈಗಾಗಲೇ ಮುಕ್ತಾಯಗೊಂಡಿದ್ದು, ಪೂರ್ವಭಾವಿ ಪರೀಕ್ಷೆ ದಿನಾಂಕವೂ ಘೋಷಣೆಯಾಗಿದೆ.
ಕೆಪಿಎಸ್ಸಿ ನೀಡಿರುವ ಮಾಹಿತಿ ಅನ್ವಯ 384 ಗೆಜೆಟೆಡ್ ಪ್ರೊಬೇಷನರ್ಸ್ (ಕೆಎಎಸ್) ಹುದ್ದೆಗೆ 2,10,910 ಅರ್ಜಿಗಳು ಸಲ್ಲಿಕೆಯಾಗಿವೆ. ಸದ್ಯದ ವೇಳಾಪಟ್ಟಿಯಂತೆ ಆಗಸ್ಟ್ 25ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ.
ಇಂಜಿನಿಯರ್, ವೈದ್ಯರಿಂದ ಅರ್ಜಿ: 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳ ವಿದ್ಯಾರ್ಹತೆಯ ವಿವರವನ್ನು ಕೆಪಿಎಸ್ಸಿ ಬಿಡುಗಡೆ ಮಾಡಿದೆ. 803 ವೈದ್ಯರು, 38,692 ಬಿಇ ಪದವೀಧರರು ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರು, ಮುಖ್ಯ ಪರೀಕ್ಷೆಗೆ ಆಯ್ಕೆಯಾಗಲಿದ್ದಾರೆ.
ಪದವೀಧರರು ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗೆ ಅತಿ ಹೆಚ್ಚು ಅರ್ಜಿ ಸಲ್ಲಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಇಂಜಿನಿಯರಿಂಗ್ ಪದವೀಧರರು ಇದ್ದಾರೆ. ಬಿಇ 38,692, ಬಿಎಸ್ಸಿ 36,091, ಬಿಕಾಂ 34,795, ಬಿಟೆಕ್ 6,156, ಬಿಸಿಎ 3,306 ಹಾಗೂ 803 ಎಂಬಿಬಿಎಸ್ ಪದವೀಧರರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ನೇರ ಪದವಿ, ನೇರ ಸ್ನಾತಕೋತ್ತರ ಪದವಿ ಸೇರಿದಂತೆ ಒಟ್ಟು 144 ಪ್ರಕಾರದ ಪದವಿ ವ್ಯಾಸಂಗ ಮಾಡಿದವರು ಕೆಎಎಸ್ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಕೆ ಮಾಡಿದ್ದಾರೆ. 384 ಹುದ್ದೆಗಳಿಗೆ ಸರ್ಕಾರ ಅಭ್ಯರ್ಥಿಗಳ ಮನವಿಯಂತೆ 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ವಯಸ್ಸಿನ ನಿರ್ಬಂಧವಿಲ್ಲದೆ ಒಂದು ಬಾರಿಗೆ ಸೀಮಿತಗೊಳಿಸಿ (one time measure) ಅರ್ಜಿ ಸಲ್ಲಿಸಲು ಹೆಚ್ಚುವರಿ ವಿಶೇಷ ಅವಕಾಶವನ್ನು ನೀಡಿತ್ತು. ಆದ್ದರಿಂದ ಅರ್ಜಿ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಕೆಪಿಎಸ್ಸಿಯ ಕಾರ್ಯದರ್ಶಿಗಳ ಪತ್ರಿಕಾ ಪ್ರಕಟಣೆಯ ಮಾಹಿತಿಯಂತೆ 25/8/2024ರ ಭಾನುವಾರ ಪೂರ್ವಭಾವಿ ಪರೀಕ್ಷೆಗಳು ನಡೆಯಲಿವೆ. ಆದರೆ ಅಂದೇ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳು ಕೂಡಾ ನಡೆಯಲಿವೆ. ಆದ್ದರಿಂದ ಬಹಳಷ್ಟು ಅಭ್ಯರ್ಥಿಗಳು ಯಾವುದಾದರೂ ಒಂದು ಪರೀಕ್ಷೆಗೆ ಗೈರಾಗಬೇಕಿದೆ.
ಹಲವು ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ ಈ ಕುರಿತು ಇದುವರೆಗೂ ಯಾವುದೇ ತೀರ್ಮಾನವಾಗಿಲ್ಲ. ಈ ಮೊದಲು ಆಯೋಗ ಪೂರ್ವಭಾವಿ ಪರೀಕ್ಷೆಯನ್ನು 21/07/2024ರಂದು ನಡೆಸುವುದಾಗಿ ಹೇಳಿತ್ತು. ಬಳಿಕ ದಿನಾಂಕ 25/08/2024ರಂದು ಪರೀಕ್ಷೆಯ ದಿನಾಂಕವನ್ನು ಮರು ನಿಗದಿಪಡಿಸಿತ್ತು.
ಸದ್ಯದ ವೇಳಾಪಟ್ಟಿಯಂತೆ 384 ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಯ ಪೂರ್ವಭಾವಿ ಪರೀಕ್ಷೆ ಆಗಸ್ಟ್ 25ರಂದು ನಡೆಯಲಿದೆ. ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ತನಕ ಪತ್ರಿಕೆ-1 ಮತ್ತು ಮಧ್ಯಾಹ್ನ 2 ರಿಂದ 4 ಗಂಟೆಯ ತನಕ ಪತ್ರಿಕೆ-2 ಪರೀಕ್ಷೆಗಳು ಇರಲಿವೆ. ಅಭ್ಯರ್ಥಿಗಳು ಪರೀಕ್ಷೆಗೆ ಈಗಾಗಲೇ ತಯಾರಿಯನ್ನು ಆರಂಭಿಸಿದ್ದಾರೆ.