ಕಾರ್ಗಿಲ್ ವಿಜಯಕ್ಕೆ 25 ವರ್ಷ ​: ಪ್ರಾಣತ್ಯಾಗ ಮಾಡಿದ ವೀರಯೋಧರಿಗೆ ಮೋದಿ ನಮನ

ನವದೆಹಲಿ: ಇಂದು ಕಾರ್ಗಿಲ್​ ವಿಜಯ್​ ದಿವಸ್​. ಭಾರತ ದೇಶ ಪಾಕಿಸ್ತಾನ ವಿರುದ್ಧದ ಭೀಕರ ಯುದ್ಧ ಜಯಿಸಿ ಇಂದಿಗೆ 25 ವರ್ಷ. ಈ ವಿಶೇಷ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.

ಕಾಶ್ಮೀರಕ್ಕೆ ಬೆಳಗ್ಗೆ 9.20ಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಮೋದಿ, ಎಂಐ- 17 ಹೆಲಿಕ್ಯಾಪ್ಟರ್​ ಮೂಲಕ ದ್ರಾಸ್‌​ಗೆ ಆಗಮಿಸಿದರು. ಕಾಶ್ಮೀರದ ತಾಂತ್ರಿಕ ಪ್ರದೇಶಕ್ಕೆ ವಿಶೇಷ ವಿಮಾನದ ಮೂಲಕ ಬಂದಿಳಿದ ಅವರನ್ನು ಲೆ.ಗವರ್ನರ್​ ಮನೋಜ್​ ಸಿನ್ಹಾ, ಮುಖ್ಯ ಕಾರ್ಯದರ್ಶಿ ಅಟಲ್​ ಡುಲ್ಲೊ ಮತ್ತು ಡಿಜಿಪಿ ಆರ್​​ಆರ್​ ಸ್ವೈನ್​ ಬರಮಾಡಿಕೊಂಡರು. ಜಮ್ಮು ಕಾಶ್ಮೀರದ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಮತ್ತು ಪಕ್ಷದ ಇತರ ಕೆಲವು ಹಿರಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದ್ರಾಸ್‌​ನಲ್ಲಿನ ಕಾರ್ಗಿಲ್​ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ, ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜನರಲ್​ ಉಪೇಂದ್ರ ದ್ವಿವೇದಿ ಉಪಸ್ಥಿತರಿದ್ದರು.

ಕಾರ್ಗಿಲ್​ ವಿಜಯ ದಿನಸ್​ನ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೇನಾ ತಂಡಗಳನ್ನು ಉದ್ದೇಶಿಸಿ ಮಾತನಾಡಿದರು. ಲಡಾಖ್​ ಲೆ.ಗವರ್ನರ್​ ಬ್ರಿಗೇಡಿಯರ್​ (ನಿವೃತ್ತ) ಬಿ.ಡಿ ಮಿಶ್ರಾ ಹಾಗೂ ಸೇನಾ ಮುಖ್ಯಸ್ಥರು ಮತ್ತು ಸೇನಾ ಹಿರಿಯ ಕಮಾಂಡರ್​ಗಳು ಭಾಗಿಯಾಗಿದ್ದಾರೆ.

ಕಾರ್ಗಿಲ್​ ವಿಜಯ್​ ದಿವಸ್ ಮಹತ್ವ​: 1999ರಲ್ಲಿ ಮೂರು ತಿಂಗಳ ಕಾಲ ನಡೆದ ಕಾರ್ಗಿಲ್​ ಯುದ್ಧದಲ್ಲಿ ಭಾರತೀಯ ಭೂಸೇನೆ, ವಾಯುಸೇನೆಯೊಂದಿಗೆ ಪಾಕಿಸ್ತಾನವನ್ನು ದಿಟ್ಟವಾಗಿ ಹಿಮ್ಮೆಟ್ಟಿಸಿತು. ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಅತ್ಯಂತ ಸವಾಲಿನ ಮಿಲಿಟರಿ ಕಾರ್ಯಾಚರಣೆ ಇದಾಗಿದೆ. ಈ ಭೀಕರ ಯುದ್ಧದಲ್ಲಿ 500ಕ್ಕೂ ಹೆಚ್ಚು ಭಾರತೀಯ ವೀರಯೋಧರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ

Leave a Reply

Your email address will not be published. Required fields are marked *