ಬೆಂಗಳೂರು: ಭಾರತದ ನಿಯಂತ್ರಕ ಮತ್ತು ಆಡಿಟರ್ ಜನರಲ್ ಅವರ ರಾಜ್ಯ ಹಣಕಾಸು ಆಡಿಟ್ ವರದಿ ಕರ್ನಾಟಕ ಸರ್ಕಾರದ ಇಲಾಖೆಗಳಲ್ಲಿ ಅನುದಾನ, ಹಣವನ್ನು ಅಕ್ರಮವಾಗಿ ಬಳಕೆ ಮಾಡಿರುವ 61 ಪ್ರಕರಣಗಳನ್ನು ಪತ್ತೆ ಮಾಡಿದೆ.
ಲೆಕ್ಕ ಪರಿಶೋಧಕರ ವರದಿಯ ಪ್ರಕಾರ, 2022-23 ರ ಅಂತ್ಯದ ವೇಳೆಗೆ ಸರ್ಕಾರದ 42.88 ಕೋಟಿ ರೂಪಾಯಿಗಳು ಬಾಕಿ ಉಳಿದಿದ್ದು, ಈ ಸಂಬಂಧ ಸರ್ಕಾರದ ಅಂತಿಮ ಕ್ರಮ ಬಾಕಿ ಇದೆ ಎಂದು ಹೇಳಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅತಿ ಹೆಚ್ಚು ಅಕ್ರಮ ನಡೆದಿದ್ದು, 10 ಪ್ರಕರಣಗಳು ವರದಿಯಾಗಿವೆ. ಈ ನಂತರದ ಸ್ಥಾನದಲ್ಲಿ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿರುವ 8 ಪ್ರಕರಣಗಳಿದ್ದರೆ, ಗೃಹ ಇಲಾಖೆಯಲ್ಲಿ 6, ಬೆಸ್ಕಾಂ ನಲ್ಲಿ 5, ಗೆಸ್ಕಾಂ ಮತ್ತು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ದಲ್ಲಿ ತಲಾ 4 ಪ್ರಕರಣಗಳು ವರದಿಯಾಗಿವೆ.
ಲೆಕ್ಕ ಪರಿಶೋಧಕರ ವರದಿಯ ಪ್ರಕಾರ, ಹಣಕಾಸು ಇಲಾಖೆಯ ಸೂಚನೆಗಳ ಹೊರತಾಗಿಯೂ ಕೆಲವು ಇಲಾಖೆಗಳು/ಕಂಪನಿಗಳಲ್ಲಿ ಸರ್ಕಾರದಿಂದ ಅನುದಾನದ ಮೇಲೆ ಗಳಿಸಿದ ಬಡ್ಡಿಯನ್ನು ಸರ್ಕಾರಕ್ಕೆ ರವಾನೆ ಮಾಡಲಾಗಿಲ್ಲ ಎಂದು ಅದು ಗಮನಿಸಿದೆ.
ಇದು ರಾಜ್ಯ ಸರ್ಕಾರದಲ್ಲಿ ಅಸಮರ್ಪಕ ಆಂತರಿಕ ನಿಯಂತ್ರಣ ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಸೂಚಿಸುತ್ತದೆ. ಇದಲ್ಲದೆ, ಕಳ್ಳತನ, ದುರುಪಯೋಗ, ಸರ್ಕಾರಿ ಸಾಮಗ್ರಿಗಳ ನಷ್ಟ ಮತ್ತು ಹಣದ ದುರುಪಯೋಗದ 15 ಪ್ರಕರಣಗಳಲ್ಲಿ ಇಲಾಖಾ ಕ್ರಮವು 25 ವರ್ಷಗಳಿಂದ ಬಾಕಿ ಉಳಿದಿದೆ ಎಂದು ಲೆಕ್ಕ ಪರಿಶೋಧಕರ ವರದಿ ಹೇಳಿದೆ.