1,328 ಪುಟಗಳ ಆರೋಪಪಟ್ಟಿಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ.
ಬೆಂಗಳೂರು : ಆರ್‌ಬಿಐ ಅಧಿಕಾರಿಗಳಂತೆ ನಟಿಸಿ ದಕ್ಷಿಣ ಬೆಂಗಳೂರಿನಲ್ಲಿ ಸಿಎಂಎಸ್ ಇನ್ಫೋ ಸಿಸ್ಟಮ್ಸ್‌ನ ಹಣ ಸಾಗಾಣಿಕೆ ವ್ಯಾನ್‌ನ್ನು ಅಡ್ಡಗಟ್ಟಿ, ಸಿಬ್ಬಂದಿಯನ್ನು ಬೆದರಿಸಿ 7.11 ಕೋಟಿ ಹಣ ದರೋಡೆ ಪ್ರಕರಣ ಸಂಬಂಧ ಸಿದ್ಧಾಪುರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. 2025ರ ನವೆಂಬರ್ 19ರಂದು ದೋಚಿದ್ದ ಹಣವನ್ನು ಆರೋಪಿಗಳು ಗೋವಾಕ್ಕೆ ತೆರಳಿ ಕ್ಯಾಸಿನೊಗಳಲ್ಲಿ ಖರ್ಚು ಮಾಡಲು ನಿರ್ಧರಿಸಿದ್ದರು ಎಂಬುದು ಈ ವೇಳೆ ಬೆಳಕಿಗೆ ಬಂದಿದೆ.
54 ಗಂಟೆಗಳಲ್ಲೇ ದರೋಡೆ ಕೇಸ್ ಭೇದಿಸಿದ್ದ ಪೊಲೀಸರು ಇದೀಗ 1,328 ಪುಟಗಳ ಆರೋಪಪಟ್ಟಿಯಲ್ಲಿ ಹಲವಾರು ಪ್ರಮುಖ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಒಂಭತ್ತು ಆರೋಪಿಗಳ ವಿರುದ್ಧ ದರೋಡೆ, ಅಕ್ರಮ ಬಂಧನ/ತಡೆ, ಸಾಕ್ಷ್ಯ ನಾಶಪಡಿಸುವುದು, ಅಪರಾಧ ಸಂಚು, ಜೀವ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳನ್ನು ದಾಖಲಿಸಲಾಗಿದೆ.
ಜಯನಗರ ಎಸಿಪಿ ಮತ್ತು ಅವರ ತಂಡ ವೈಜ್ಞಾನಿಕ ವಿಧಾನದಲ್ಲಿ ತನಿಖೆ ಪೂರ್ಣಗೊಳಿಸಿದ್ದು, ಸಿಎಂಎಸ್ ಇನ್ಫೋ ಸಿಸ್ಟಮ್ಸ್‌ನ ಮಾಜಿ ಉದ್ಯೋಗಿ, ಎ1 ಜೆ. ಜೇವಿಯರ್ ಈ ಸಂಚಿನ ಪ್ರಮುಖ ಸಂಚುಕೋರನಾಗಿದ್ದ. ಕಂಪನಿಯ ಎಲ್ಲಾ ವಿವರಗಳನ್ನೂ ಅವನು ಚೆನ್ನಾಗಿ ತಿಳಿದಿದ್ದ. ಅಲ್ಲದೆ ದರೋಡೆ ಗ್ಯಾಂಗ್ ಸ್ಪಷ್ಟವಾದ ಪರಾರಿ ಮಾರ್ಗ ಕೂಡ ರೂಪಿಸಿಕೊಂಡಿತ್ತು. ಕರ್ನಾಟಕದಿಂದ ಆಂಧ್ರ ಪ್ರದೇಶ ಪ್ರವೇಶಿಸಿ, ಅಲ್ಲಿಂದ ಉತ್ತರ ಪ್ರದೇಶದ ಮೂಲಕ ಅಥವಾ ನೇರವಾಗಿ ಗೋವಾಕ್ಕೆ ತೆರಳುವ ಯೋಜನೆ ಇವರದ್ದಾಗಿತ್ತು. ಅಂತಿಮವಾಗಿ ಗೋವಾಕ್ಕೆ ತೆರಳಿ ಕ್ಯಾಸಿನೊಗಳಲ್ಲಿ ಹಣ ವ್ಯಯಿಸುವ ಉದ್ದೇಶ ಇವರು ಹೊಂದಿದ್ದರು. ಸಾಲದ ಹಣ ತೀರಿಸುವ ಉದ್ದೇಶವೂ ಇವರಲ್ಲಿತ್ತು ಎಂಬ ಅಂಶವನ್ನು ಚಾರ್ಜ್ಶೀಟ್ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.
For More Updates Join our WhatsApp Group :




