ಬೆಂಗಳೂರು: ಜಮೀನು ಭೂಸ್ವಾಧೀನಕ್ಕೆ ಒಳಗಾಗಿ, ಪರಿಹಾರ ಪಡೆದ ಬಳಿಕವೂ ಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ಏಳು ಬಾರಿ ಅರ್ಜಿ ವಜಾಗೊಂಡ ಮಾಹಿತಿ ಮರೆಮಾಚಿ ಎಂಟನೇ ಬಾರಿ ಅರ್ಜಿ ಸಲ್ಲಿಸಿದ್ದ ಕುಟುಂಬಸ್ಥರ ನಡೆಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದೊಂದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗ ಎಂದು ತಿಳಿಸಿ 10 ಲಕ್ಷ ರೂ.ಗಳ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ.
ಬೆಂಗಳೂರು ನಗರದ ದೊಡ್ಡ ಬಸ್ತಿ ಮುಖ್ಯರಸ್ತೆಯ ಭುವನೇಶ್ವರಿ ನಗರದದ ನಿವಾಸಿಗಳಾದ ಗಂಗಮ್ಮ ಮತ್ತು ಕುಟುಂಬಸ್ಥರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ. ಅಲ್ಲದೇ, ಆದೇಶ ಪ್ರಕಟವಾದ ನಾಲ್ಕು ವಾರಗಳಲ್ಲಿ 10 ಲಕ್ಷ ಮೊತ್ತವನ್ನು ರಾಜ್ಯ ಕಾನೂನು ಸೇವಾ ಪ್ರಧಿಕಾರಕ್ಕೆ ಪಾವತಿಸಲು ಸೂಚನೆ ನೀಡಿದೆ.
ಪ್ರಕರಣ ಸಂಬಂಧ ಮೊದಲ ಅರ್ಜಿ 1994ರಲ್ಲಿ ಸಲ್ಲಿಕೆಯಾಗಿದೆ. ಈವರೆಗೂ ಎಂಟು ಬಾರಿ ಕಾನೂನು ಹೊರಾಟ ನಡೆದಿದೆ. ಎಲ್ಲ ಅರ್ಜಿಗಳು ವಜಾಗೊಂಡಿವೆ. ಈ ಅಂಶವನ್ನು ಕೊನೆಯ ಅರ್ಜಿಯಲ್ಲಿ ಮರೆ ಮಾಚಲಾಗಿದೆ. ಆದ್ದರಿಂದ ಅರ್ಜಿದಾರರು ತಪ್ಪಿತಸ್ಥರಾಗಿದ್ದು, ಶುದ್ಧ ಹಸ್ತದಿಂದ ನ್ಯಾಯಾಲಯಕ್ಕೆ ಬಂದಿಲ್ಲ. ವಂಚನೆ, ತಪ್ಪು ಮಾಹಿತಿ ನೀಡಿ ನ್ಯಾಯಾಲಯಕ್ಕೆ ಬರುವವರು ನ್ಯಾಯಾಂಗ ಪ್ರಕ್ರಿಯೆ ಪಾವಿತ್ರ್ಯ ಕಳಂಕಗೊಳಿಸಿದಂತಾಗಲಿದೆ.
ನ್ಯಾಯದ ಘಟನೆತೆಗೆ ಅವಮಾನ ಮಾಡಿದಂತಾಗಲಿದ್ದು, ನ್ಯಾಯಾಂಗ ವ್ಯವಸ್ಥೆಯ ಮೇಲೆ ದಾಳಿಯಾಗಲಿದೆ. ನ್ಯಾಯ ಕಳಂಕರಹಿತವಾಗಿರಬೇಕಾದರೆ ದೃಢವಾದ ಖಂಡನೆಯೊಂದಿಗೆ ಆದೇಶಿಸಬೇಕು. ಜತೆಗೆ, ಈ ಆದೇಶಗಳು ಇತರರಿಗೆ ಎಚ್ಚರಿಕೆ ನೀಡುವಂತಹ ಪರಿಣಾಮ ಬೀರುವಂತಿರಬೇಕು. ನ್ಯಾಯಾಲಯವನ್ನು ಆಟದ ಮೈದಾನದಂತೆ ಪರಿಗಣಿಸುವ ಬೇಜವಾಬ್ದಾರರಿಗೆ ದಂಡದ ಮೂಲಕ ಪ್ರತಿಕ್ರಿಯೆ ನೀಡಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಒಂದು ವೇಳೆ ಈ ಅರ್ಜಿ ಪುರಸ್ಕರಿಸಿದಲ್ಲಿ ಮತ್ತೊಮ್ಮೆ ನ್ಯಾಯಾಂಗ ಹೋರಾಟ ಮುಂದುವರೆಸಲು ಅವಕಾಶ ನೀಡಿದಂತಾಗಲಿದೆ. ನ್ಯಾಯಾಂಗ ಪ್ರಕ್ರಿಯೆ ದುರುಪಯೋಗಕ್ಕೆ ಅವಕಾಶ ನೀಡಿದಂತಾಗಲಿದೆ. ಆದ್ದರಿಂದ ಪ್ರಾಮಾಣಿಕತೆಯಿಲ್ಲದ ಅರ್ಜಿಯನ್ನು ದಂಡ ವಿಧಿಸಿ ವಜಾಗೊಳಿಸಲಾಗುತ್ತಿದೆ ಎಂದು ಪೀಠ ಹೇಳಿದೆ.