ಪಟನಾ: ಮೇಲಿನ ಫೋಟೋದಲ್ಲಿ ನೀವು ನೋಡುತ್ತಿರುವ ಕಲ್ಲು ಸಾಮಾನ್ಯವಾದ ಕಲ್ಲಲ್ಲ, ನಿಮ್ಮ ಬಳಿ ಇಂಥದ್ದೊಂದು ಕಲ್ಲು ಇದ್ದರೆ ಸಾಕು, ನೂರಾರು ಕೋಟಿ ರೂಪಾಯಿ ಒಡೆಯರಾಗಿಬಿಡುತ್ತೀರಿ! ಹಾಗಾಂತ ಇದು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಭೂಮಿಯ ಮೇಲೆ ಬಹಳ ಅಪರೂಪ ಇದು. ಕೇವಲ 50 ಗ್ರಾಂ ಕಲ್ಲಿನ ಬೆಲೆ ಬರೋಬ್ಬರಿ 800 ಕೋಟಿ ರೂಪಾಯಿಗೂ ಹೆಚ್ಚು.
ಈ ಕಲ್ಲಿನ ವಿಶೇಷತೆ ಏನು? ಇದು ಏಕೆ ದುಬಾರಿ? ಇದು ಎಲ್ಲಿ ಕಂಡುಬರುತ್ತದೆ? ಎಂಬಿತ್ಯಾದಿ ಅಚ್ಚರಿ ಮಾಹಿತಿಯನ್ನು ನಾವೀಗ ತಿಳಿದುಕೊಳ್ಳೋಣ.
ಈ ಕಲ್ಲಿನ ಹೆಸರು ಕ್ಯಾಲಿಫೋರ್ನಿಯಂ. ಇದೊಂದು ವಿಕಿರಣಶೀಲ (radioactive) ವಸ್ತು. ಕೇವಲ 50 ಗ್ರಾಂ ಕಲ್ಲಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 850 ಕೋಟಿ ರೂ. ಮೌಲ್ಯವಿದೆ. ಇದನ್ನು ಕದ್ದು ಸಾಗಿಸುತ್ತಿದ್ದ ಸಂದರ್ಭದಲ್ಲಿ ಬಿಹಾರದ ಗೋಪಾಲ್ಗಂಜ್ ಠಾಣಾ ಪೊಲೀಸರು ಮೂವರು ಕಳ್ಳಸಾಗಾಣೆಗಾರರನ್ನು ಬಂಧಿಸಿ, 50 ಗ್ರಾಂ ತೂಕದ ಕ್ಯಾಲಿಫೋರ್ನಿಯಂ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಅತ್ಯಂತ ಬೆಲೆಬಾಳುವ ಪದಾರ್ಥವನ್ನು ಕದ್ದು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ನಮಗೆ ಸಿಕ್ಕಿತು. ಜಿಲ್ಲಾ ತನಿಖಾ ಘಟಕ (ಡಿಐಯು), ವಿಶೇಷ ಕಾರ್ಯಾಚರಣೆ ಗುಂಪು-7 (ಎಸ್ಒಜಿ-7) ಮತ್ತು ವಿಶೇಷ ಕಾರ್ಯಪಡೆ (ಎಸ್ಟಿಎಫ್) ಸೇರಿದಂತೆ ವಿವಿಧ ವಿಶೇಷ ಘಟಕಗಳ ಸದಸ್ಯರನ್ನು ಒಳಗೊಂಡಂತೆ ಒಂದು ತಂಡವನ್ನು ರಚಿಸಿದೆವು. ಈ ತಂಡವನ್ನು ಕುಚಯ್ಕೋಟ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಮೇಲ್ವಿಚಾರಣೆಯಲ್ಲಿ ರಚನೆ ಮಾಡಲಾಯಿತು. ಬಳಿಕ ಬಿಹಾರ-ಉತ್ತರ ಪ್ರದೇಶ-ಬಲ್ತಾರಿ ಗಡಿಯಲ್ಲಿ ನಿಯೋಜಿಸಯಿತು ಎಂದು ಗೋಪಾಲಗಂಜ್ ಎಸ್ಪಿ ಸ್ವರ್ಣ್ ಪ್ರಭಾತ್ ಮಾಹಿತಿ ನೀಡಿದರು.
ಈ ವಿಶೇಷ ತಂಡ ಗುರುವಾರ ಸಂಜೆ ಆರೋಪಿಗಳನ್ನು ಬಂಧಿಸಿದ್ದು, ಅವರು ಪ್ರಯಾಣ ಮಾಡುತ್ತಿದ್ದ ಮೋಟರ್ ಸೈಕಲ್, ನಾಲ್ಕು ಮೊಬೈಲ್ ಫೋನ್ ಮತ್ತು 50 ಗ್ರಾಂ ತೂಕದ ಕ್ಯಾಲಿಫೋರ್ನಿಯಂ ಅನ್ನು ವಶಕ್ಕೆ ಪಡೆಯಲಾಯಿತು ಎಂದು ಪ್ರಭಾತ್ ಅವರು ಹೇಳಿದರು.
ಮುಂದುವರಿದು ಮಾತನಾಡಿದ ಪ್ರಭಾತ್, ಕ್ಯಾಲಿಫೋರ್ನಿಯಂ ಅತ್ಯಂತ ಬೆಲೆಬಾಳುವ ವಿಕಿರಣಶೀಲ ವಸ್ತುವಾಗಿದೆ. ಪ್ರತಿ ಒಂದು ಗ್ರಾಂ 17 ಕೋಟಿ ರೂ. ಬೆಲೆ ಬಾಳುತ್ತದೆ. ಒಟ್ಟು 50 ಗ್ರಾಂಗೆ 850 ಕೋಟಿ ರೂ. ಆಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ವಸ್ತುವಿಗೆ ಭಾರಿ ಬೇಡಿಕೆ ಇದೆ ಎಂದು ಪ್ರಭಾತ್ ತಿಳಿಸಿದರು.
ಬಂಧಿತರನ್ನು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ತುಮ್ಖುಹಿ ರಾಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪರ್ಸೌನಿ ಬುಜರ್ಗ್ ನಿವಾಸಿ ಛೋಟೆ ಲಾಲ್ ಪ್ರಸಾದ್ (40), ಗೋಪಾಲ್ಗಂಜ್ನ ನಗರ್ ಪೊಲೀಸ್ ಠಾಣಾ ವ್ಯಾಪ್ತಿಯ ಕೌಶಲ್ಯ ಚೌಕ್ ನಿವಾಸಿ ಚಂದನ್ ಗುಪ್ತ ಮತ್ತು ಗೋಪಾಲ್ಗಂಜ್ನ ಕುಶಾಹರ್ ಮಥಿಯಾ ಮೂಲದ ಚಂದನ್ ರಾಮ್ ಎಂದು ಗುರತಿಸಲಾಗಿದೆ.
ಬಂಧಿತ ಸ್ಮಗ್ಲರ್ಗಳು ಬೆಲೆ ಬಾಳುವ ವಸ್ತುವನ್ನು ಮಾರಾಟ ಮಾಡಲು ಕಳೆದ 7 ತಿಂಗಳಿನಿಂದ ಪಯತ್ನಿಸುತ್ತಿದ್ದರು. ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವಸ್ತುವನ್ನು ನಿರ್ವಹಿಸಲು ಮತ್ತು ಹೆಚ್ಚಿನ ತನಿಖೆ ನಡೆಸಲು ವಿಧಿ ವಿಜ್ಞಾನ ಪ್ರಯೋಗಾಲಯದ ವಿಶೇಷ ತಂಡವನ್ನು ಕರೆಯಲಾಗಿದೆ. ಬಂಧಿತ ಆರೋಪಿಗಳು ವಸ್ತುವಿನ ಪರೀಕ್ಷಾ ವರದಿಯನ್ನು ಸಹ ಕೊಂಡೊಯ್ಯುತ್ತಿದ್ದರು. ಈ ವಸ್ತುವಿನ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಅಧಿಕಾರಿಗಳು ಸಂಪೂರ್ಣ ತನಿಖೆಗಾಗಿ ಅಣುಶಕ್ತಿ ಇಲಾಖೆಗೆ (ಡಿಎಇ) ಸೂಚನೆ ನೀಡಿದ್ದಾರೆ.
ಅಂದಹಾಗೆ ಈ ಕ್ಯಾಲಿಫೋರ್ನಿಯಮ್ ವಾಸ್ತವವಾಗಿ ಅಪರೂಪದ ವಿಕಿರಣಶೀಲ ವಸ್ತುವಾಗಿದೆ. ಇದು ಪರಿಸರದಲ್ಲಿ ನೈಸರ್ಗಿಕವಾಗಿ ಕಂಡುಬರುವ ವಸ್ತುವಲ್ಲ. ಪ್ರಯೋಗಾಲಯಗಳಲ್ಲಿ ಅಧಿಕ ಒತ್ತಡದ ಐಸೊಟೋಪ್ ರಿಯಾಕ್ಟರ್ಗಳಲ್ಲಿ ಇದನ್ನು ತಯಾರಿಸಲಾಗುತ್ತದೆ. ಕ್ಯಾಲಿಫೋರ್ನಿಯಂ ಅನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಎರಡು ಪರಮಾಣು ರಿಯಾಕ್ಟರ್ಗಳಿವೆ. ಒಂದು ಅಮೆರಿಕದಲ್ಲಿ ಮತ್ತು ಇನ್ನೊಂದು ರಷ್ಯಾದಲ್ಲಿದೆ. ಇದನ್ನು ಮೊದಲು 1950 ರಲ್ಲಿ ಉತ್ಪಾದಿಸಲಾಯಿತು. ಈ ಕ್ಯಾಲಿಫೋರ್ನಿಯಮ್ ಅನ್ನು ಭೂಗತ ಚಿನ್ನ ಮತ್ತು ಬೆಳ್ಳಿಯ ನಿಕ್ಷೇಪಗಳ ಪರಿಶೋಧನೆಯಲ್ಲಿ ಹಾಗೂ ತೈಲ ಮತ್ತು ನೀರಿನ ಪದರಗಳನ್ನು ಗುರುತಿಸಲು ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ.