ಕೇರಳದ ದೇವಸ್ಥಾನದಲ್ಲಿ ಶತ್ರು ಭೈರವಿ ಯಾಗ ನಡೆಸಿದ ಆರೋಪ : ಡಿಕೆಶಿ ಸ್ಪಷ್ಟನೆ

ಬೆಂಗಳೂರು: ಕೇರಳದ ದೇವಸ್ಥಾನದಲ್ಲಿ ಪ್ರಾಣಿ ಬಲಿ ಒಳಗೊಂಡ ”ಶತ್ರು ಭೈರವಿ ಯಾಗ” ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ಅಂತಹ ಯಾವುದೇ ಯಾಗ ನಡೆದಿಲ್ಲ ಎಂದು ದೇವಾಲಯ ಆಡಳಿತ ಮಂಡಳಿ ಅಧಿಕೃತ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ಮತ್ತೊಂದು ಸ್ಪಷ್ಟನೆ ನೀಡಿ ವಿವಾದ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ.

ಶತ್ರು ಭೈರವಿ ಯಾಗ ನಡೆದಿದೆ ಎನ್ನುವ ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ಕೇರಳ ಸರ್ಕಾರದ ಸಚಿವರು ಅಲ್ಲಗಳೆದಿದ್ದಾರೆ. ದೇವಾಲಯ ಆಡಳಿತ ಮಂಡಳಿಯಿಂದ ವರದಿ ಪಡೆದುಕೊಂಡು ಅಧಿಕೃತ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಡಿಕೆ ಶಿವಕುಮಾರ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಮತ್ತೊಂದು ಸ್ಪಷ್ಟನೆ ನೀಡಿದ್ದಾರೆ.

”ನಾನು ದೇವಿ ರಾಜರಾಜೇಶ್ವರಿಯ ಭಕ್ತನಾಗಿದ್ದು, ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡುವುದಿಲ್ಲ ಎನ್ನುವ ಅರಿವಿದೆ. ನನ್ನ ಹೇಳಿಕೆಯನ್ನು ಕೆಲವರು ತಪ್ಪಾಗಿ ಗ್ರಹಿಸಿದ್ದು, ದೇವಸ್ಥಾನದಿಂದ 15 ಕಿ.ಮೀ. ದೂರದಲ್ಲಿರುವ ಖಾಸಗಿ ಸ್ಥಳದಲ್ಲಿ ಯಾಗ ನಡೆದಿದೆ ಎಂದು ಸ್ಪಷ್ಟಪಡಿಸುತ್ತೇನೆ. ಯಾಗ ನಡೆದಿರುವ ಸ್ಥಳದ ಬಗ್ಗೆ ಮಾಹಿತಿ ನೀಡಲಷ್ಟೇ ನಾನು ದೇಗುಲದ ಹೆಸರನ್ನು ಉಲ್ಲೇಖಿಸಿದ್ದೆ. ಕೆಲವು ದಿನಗಳ ಹಿಂದೆ ತಾಯಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ‌ಭೇಟಿ‌ ನೀಡಿ ದೇವಿಯ ಆಶೀರ್ವಾದ ಪಡೆದಿದ್ದೆ. ವಿಷಯಗಳನ್ನು ಸಂದರ್ಭದಿಂದ ಹೊರಗಿಟ್ಟು ಅವುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂಬುದು ನನ್ನ ವಿನಂತಿ” ಎಂದು ಡಿಕೆ ಶಿವಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *