ತುಮಕೂರು: ಕಲ್ಪತರು ನಾಡಿನ ಜಿಲ್ಲಾಧಿಕಾರಿ ಕಚೇರಿ ಆವರಣ, ಪಾಲಿಕೆ ಪಕ್ಕದಲ್ಲೇ ಆಪತ್ತು ಎದುರಾಗಿದೆ. ತಮ್ಮ ಜೀವ ಕೈಯಲಿಡುದುಕೊಂಡೇ ಜನ ಓಡಾಡಿತ್ತಿದ್ದರೆ, ಇತ್ತ ಭಯದ ನೆರಳಲ್ಲೇ ವಾಹನ ಸವಾರರೂ ಸಂಚಾರ ಮಾಡುತ್ತಿದ್ದಾರೆ. ಏನದು ಗಂಡಾಂತರ ಅಂತೀರಾ? ಈ ಸ್ಟೋರಿ ನೋಡಿ..
ಹೌದು, ಕಲ್ಪತರು ನಾಡು ತುಮಕೂರು ನಗರದಲ್ಲಿ ಒಣಗಿದ ಮರಗಳಿಂದ ಈಗ ಆಪತ್ತು ಎದುರಾಗಿದೆ. ಪಾದಾಚಾರಿಗಳು, ವಾಹನ ಸವಾರರು ರಸ್ತೆ ಮೇಲೆ ಭಯದ ನೆರಳಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದಾದ್ಯಂತ ನಾನಾ ಭಾಗಗಳಲ್ಲಿ ಜೀವ ಕಳೆದುಕೊಂಡಿರುವ ಮರಗಳು ಒಣಗಿ ನಿಂತಿವೆ. ಜೋರು ಗಾಳಿ ಮಳೆಗೆ ಒಣಗಿ ಅಪಾಯದಂತೆ ನಿಂತಿರುವ ಮರಗಳು ಯಾವಾಗ ಯಾರ ಮೇಲೆ ಬಿದ್ದು ಪ್ರಾಣಕ್ಕೆ ಅಪಾಯವನ್ನು ಉಂಟು ಮಾಡುತ್ತವೋ ಗೊತ್ತಿಲ್ಲ. ಅಂತಹ ಪರಿಸ್ಥಿತಿ ನಗರದಲ್ಲಿದೆ.
ವಾಹನ ಸವಾರರೇ ಹುಷಾರ್:-
ವಾಹನ ಸವಾರರು ರಸ್ತೆ ಮೇಲೆ ಸಂಚಾರ ಮಾಡುವಾಗ ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ. ಒಂದು ಕಡೆ ರಸ್ತೆಯ ಗುಂಡಿಗಳಿಂದ ಬೇಸತ್ತಿರುವ ಜನ, ಇದೀಗ ಮರ ಕೊಂಬೆಗಳಿಂದ ಜೀವ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.
ಒಣಗಿದ ಮರಗಳಿಂದಲೇ ಕುತ್ತು:- ನಗರದಲ್ಲಿ ಒಣಗಿದ ಮರಗಳಿಂದಲೇ ಜೀವಕ್ಕೆ ಕುತ್ತು ಬರುವ ಸಾಧ್ಯತೆಯಿದೆ. ಒಣಗಿದ ಮರದ ಕೊಂಬೆಗಳು, ಕಾರು, ಬೈಕ್, ಪಾದಾಚಾರಿಗಳ ತಲೆ ಮೇಲೆ ಬೀಳುವ ಸಂಭವವಿದೆ. ಕಳೆದ ಹದಿನೈದು ದಿನದ ಹಿಂದೆ ಸುರಿದ ಭಾರಿ ಗಾಳಿ ಮಳೆಗೆ ತೆಂಗಿನ ಮರವೊಂದು ಮನೆ ಮೇಲೆ ಉರುಳಿ ಬಿದ್ದಿದ್ದ ಪ್ರಕರಣ ನಡೆದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.
ಪಾಲಿಕೆ ಪಕ್ಕದಲ್ಲೇ ಕಾದಿದೆ ಆಪತ್ತು;– ತುಮಕೂರು ನಗರದ ಹೃದಯ ಭಾಗ ಪಾಲಿಕೆ ಪಕ್ಕದ ಟೌನ್ ಹಾಲ್ ವೃತ್ತದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಶತಮಾನದ ಆಲದ ಮರವೊಂದು ಒಣಗಿ ನಿಂತಿದೆ. ಬೃಹತ್ ಮರದ ಕೊಂಬೆಗಳೆಲ್ಲಾ ಒಣಗಿ ನಿಂತಿದ್ದು, ಜೋರು ಗಾಳಿ ಮಳೆಗೆ ಕೊಂಬೆಗಳು ಸೇರಿದಂತೆ ಬುಡದಲ್ಲೂ ಸತ್ವವಿಲ್ಲದ ಕಾರಣ ಬುಡ ಸಮೇತ ಉರುಳಿ ಬೀಳುವ ಸಾಧ್ಯತೆಯಿದೆ. ಈ ಆಲದ ಮರದ ಅಡಿಯ ಅಕ್ಕ-ಪಕ್ಕ ಆಸ್ಪತ್ರೆ, ಹೋಟೆಲ್ ಇದೆ. ಟೀ ಅಂಗಡಿಗಳೂ ಇವೆ. ಅಲ್ಲದೇ ಈ ಮರದ ಅಡಿಯಲ್ಲಿಯೇ ಬೈಕ್ ಪಾರ್ಕಿಂಗ್ ಸಹ ಮಾಡಲಾಗುತ್ತದೆ. ಆಸ್ಪತ್ರೆಗೆ ಬರುವ ರೋಗಿಗಳು, ಹೋಟೆಲ್ ಗೆ ಬರುವ ಗ್ರಾಹಕರು, ಕೆಲಸ ಕಾರ್ಯಗಳ ನಿಮಿತ್ತ ಪಾಲಿಕೆಗೆ ಬರುವ ನೂರಾರು ಸಾರ್ವಜನಿಕರು ಈ ಮರದ ಸುತ್ತ ಇರುವ ಜಕ್ಕಡಿ ಮೇಲೆ ಆಶ್ರಯ ಪಡೆಯುತ್ತಾರೆ. ಕೊಂಬೆ ರೆಂಬೆ, ಮರ ಬಿದ್ದರೆ ಜನ ತಮ್ಮ ಪ್ರಾಣ ಕಳೆದುಕೊಳ್ಳುವುದಂತೂ ಅಕ್ಷರಶ: ಸತ್ಯ.
ಜಿಲ್ಲಾಧಿಕಾರಿ ಆವರಣದಲ್ಲೇ ಇದೆ ಆಪತ್ತು: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಬನ್ನಿ ಮರವೊಂದು ಕಳೆದ ಎರಡು ವರ್ಷಗಳಿಂದ ಒಣಗಿ ನಿಂತಿದೆ. ಇದು ಕಚೇರಿಗೆ ಬರುವ ಜನರ ಪ್ರಾಣಕ್ಕೆ ಸಂಚಕಾರ ತರುವ ಸಾಧ್ಯತೆಯಿದೆ. ಯಾವುದೇ ಘಳಿಗೆಯಲ್ಲಾದರೂ ಸಾರ್ವಜನಿಕರ ಮೇಲೆ ಬೀಳುವ ಸಂಭವವಿದೆ. ಈ ಮರವನ್ನೂ ಸಹ ತೆರವುಗೊಳಿಸುವಂತೆ ಸಾರ್ವಜನಿಕ ಆಗ್ರಹ ಮಾಡಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ತೆರವಿಗೆ ಪತ್ರಬರೆದರೂ ಅಧಿಕಾರಿಗಳ ನಿರ್ಲಕ್ಷ್ಯ:- ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಒಣಗಿ ನಿಂತಿರುವ ಮರವನ್ನ ತೆರವು ಮಾಡುವಂತೆ ವೃಕ್ಷಮಿತ್ರ ಅಧ್ಯಕ್ಷರಾದ ಪ್ರೊ ಕೆ ಸಿದ್ದಪ್ಪ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಇತ್ತ ಪಾಲಿಕೆ ಪಕ್ಕದ ರೈಲ್ವೆ ರಸ್ತೆಯ ಮರದ ಒಣಗಿ ನಿಂತಿರುವ ಬೃಹತ್ ಆಲದ ಮರವನ್ನು ತೆರವು ಮಾಡಬೇಕೆಂದೂ ಸಹ ಅಲ್ಲಿನ ಸಾರ್ವಜನಿಕರು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಆದರೂ ಒಣಗಿದ ಮರ ತೆರವಿಗೆ ಅಧಿಕಾರಿಗಳು ಇನ್ನು ಸಹ ಕ್ರಮ ಕೈಗೊಂಡಿಲ್ಲ. ಹೀಗಾಗಿ ಜಿಲ್ಲಾಡಳಿತ, ಪಾಲಿಕೆ ವಿರುದ್ದ ಅಸಮಾಧಾನ ವ್ಯಕ್ತವಾಗಿದೆ.