ನವದೆಹಲಿ : ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿನ ಗುಣಾತ್ಮಕ ಬದಲಾವಣೆಯು ‘ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ರ್ಯಾಂಕಿಂಗ್’ನಲ್ಲಿ ಪ್ರತಿಫಲಿಸುತ್ತಿದ್ದು, ಮೂರನೇ ಅವಧಿಯಲ್ಲಿ ಸಂಶೋಧನೆ ಹಾಗೂ ನಾವೀನ್ಯತೆಗೆ ಮತ್ತಷ್ಟು ಉತ್ತೇಜನ ನೀಡಲು ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
‘ಕಳೆದೊಂದು ದಶಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆಯತ್ತ ಗಮನಹರಿಸಿದ್ದೇವೆ. ಇದು ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ರ್ಯಾಂಕಿಂಗ್ನಲ್ಲಿ ಪ್ರತಿಫಲಿಸಿದೆ. ಕಠಿಣ ಪರಿಶ್ರಮ ಹಾಗೂ ಸಮರ್ಪಣೆಗಾಗಿ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಅಭಿನಂದನೆಗಳು. ಈ ಅವಧಿಯಲ್ಲಿ ಸಂಶೋಧನೆ ಹಾಗೂ ನಾವೀನ್ಯತೆಗೆ ಇನ್ನೂ ಹೆಚ್ಚಿನ ಉತ್ತೇಜನ ನೀಡಲು ಬಯಸುತ್ತೇವೆ’ ಎಂದು ಹೇಳಿದ್ದಾರೆ.
ಉನ್ನತ ಶಿಕ್ಷಣ ಸಂಸ್ಥೆಗಳ ಕುರಿತ ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ರ್ಯಾಂಕಿಂಗ್-2025 ಪಟ್ಟಿ ಪ್ರಕಟಗೊಂಡಿದ್ದು, ವಿಶ್ವದ ಅಗ್ರ 150 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬಾಂಬೆ ಹಾಗೂ ದೆಹಲಿಯಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಸ್ಥಾನ ಪಡೆದಿವೆ.
ಜಾಗತಿಕ ರ್ಯಾಂಕಿಂಗ್ ಪಟ್ಟಿಯಲ್ಲಿ ಸತತ 13ನೇ ಬಾರಿಯೂ ಅಮೆರಿಕದ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಮೊದಲ ಸ್ಥಾನ ಉಳಿಸಿಕೊಂಡಿದೆ. ಕಳೆದ ವರ್ಷ 149ನೇ ಸ್ಥಾನದಲ್ಲಿದ್ದ ಐಐಟಿ ಬಾಂಬೆ, 31 ಸ್ಥಾನಗಳ ಬಡ್ತಿ ಪಡೆದು ಈ ವರ್ಷ 118ನೇ ರ್ಯಾಂಕ್ಗೆ ಏರಿದೆ. ಐಐಟಿ ದೆಹಲಿ, ಕಳೆದ ಬಾರಿಗಿಂತ 47 ಸ್ಥಾನ ಮೇಲಕ್ಕೇರಿದ್ದು, 150ನೇ ಸ್ಥಾನ ಪಡೆದುಕೊಂಡಿದೆ.
ಉನ್ನತ ಶಿಕ್ಷಣ ವ್ಯವಸ್ಥೆಯ ವಿಶ್ಲೇಷಣೆ ನಡೆಸಿ, ರ್ಯಾಂಕಿಂಗ್ ನೀಡುವ ಲಂಡನ್ ಮೂಲದ ಕ್ವಾಕ್ವರೇಲಿ ಸೈಮಂಡ್ಸ್ (ಕ್ಯೂಎಸ್) ಸಂಸ್ಥೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದು ಪ್ರಕಟಿಸಿರುವ ಶ್ರೇಯಾಂಕದ ಪ್ರಕಾರ, ‘ಉದ್ಯೋಗ ಪಡೆಯಲು ಕೌಶಲ ವರ್ಧನೆ’ ವಿಭಾಗದಲ್ಲಿ ದೆಹಲಿ ವಿಶ್ವವಿದ್ಯಾಲಯ ಜಾಗತಿಕ ಮಟ್ಟದಲ್ಲಿ 44ನೇ ಸ್ಥಾನ ಪಡೆದುಕೊಂಡಿದೆ.
2015ರಲ್ಲಿ 11ಕ್ಕೆ ಹೋಲಿಸಿದಾಗ ಕಳೆದೊಂದು ದಶಕದಲ್ಲಿ ಭಾರತದ ಶಿಕ್ಷಣ ಸಂಸ್ಥೆಗಳ ಪ್ರಾತಿನಿಧ್ಯ 46ಕ್ಕೆ ಹೆಚ್ಚಳವಾಗಿದ್ದು, ಶೇ 318ರಷ್ಟು ಏರಿಕೆ ಕಂಡಿದೆ. ಆ ಮೂಲಕ ಜಿ20 ದೇಶಗಳ ಪೈಕಿ ಗರಿಷ್ಠ ಪ್ರಗತಿಯನ್ನು ಸಾಧಿಸಿದೆ ಎಂದು ಕ್ಯೂಎಸ್ ತಿಳಿಸಿದೆ.