ನೀತಿ ಸಂಹಿತೆ ಅಂತ್ಯ : ಇಂದಿನಿಂದ ಸರ್ಕಾರದ ಪೂರ್ಣ ಪ್ರಮಾಣದ ಕೆಲಸ ಆರಂಭ

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡಿದೆ. ಲೋಕಸಭೆ ಚುನಾವಣೆ ಹಾಗೂ ವಿಧಾನಪರಿಷತ್​ ಚುನಾವಣೆಗಳು ಮುಗಿದು, ಫಲಿತಾಂಶವೂ ಬಂದ ಬೆನ್ನಲ್ಲೇ ಚುನಾವಣಾ ನೀತಿ ಸಂಹಿತೆ ಕೂಡ ಕೊನೆಗೊಂಡಿದೆ.

ಚುನಾವಣೆಗಳ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳುಗಳ ಕಾಲ ನೀತಿ ಸಂಹಿತೆ ಇದ್ದ ಕಾರಣ ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಆಡಳಿತ ಯಂತ್ರವೂ ಸ್ತಬ್ಧವಾಗಿತ್ತು. ಲೋಕಸಭಾ ಫಲಿತಾಂಶದ ನಂತರವೂ ವಿಧಾನಪರಿಷತ್ ಚುನಾವಣೆ ನಡೆದ ಕಾರಣ ಚುನಾವಣಾ ಆಯೋಗವು ಜೂನ್ 6 ರವರೆಗೆ ನೀತಿ ಸಂಹಿತೆಯನ್ನು ವಿಸ್ತರಿಸಿತ್ತು. ಅದು ಗುರುವಾರ ಸಂಜೆಗೆ ಮುಕ್ತಾಯಗೊಂಡಿದೆ.

ಈ ಹಿನ್ನೆಲೆಯಲ್ಲಿ ಆಡಳಿತ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಚುರುಕು ಸಿಗಲಿದೆ. ಇಂದಿನಿಂದ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸಭೆಗಳನ್ನು ನಡೆಸಬಹುದಾಗಿದೆ. ಲೋಕಸಭಾ ಚುನಾವಣೆಗೆ ಮಾರ್ಚ್‌ ತಿಂಗಳಲ್ಲೇ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಮಾರ್ಚ್ 20ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಸುಮಾರು ಮೂರು ತಿಂಗಳ ಕಾಲ ಚುನಾವಣಾ ಪ್ರಕ್ರಿಯೆ ನಡೆಯಿತು. ಇದರಿಂದಾಗಿ ಸರ್ಕಾರಿ ಯಂತ್ರ ಬಹುತೇಕ ಸ್ಥಗಿತಗೊಂಡಿತ್ತು.

ಸಚಿವ ಸಂಪುಟ ಸಭೆ, ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯೂ ನಿಂತು ಹೋಗಿತ್ತು. ಫೆಬ್ರವರಿಯಲ್ಲಿ ಬಜೆಟ್‌ ಮಂಡಿಸಲಾಗಿದ್ದರೂ ಅದರ ಅನುಷ್ಠಾನಕ್ಕೆ ಆದೇಶ ಹೊರಡಿಸಲು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ವಿವಿಧ ಇಲಾಖೆಗಳ ಅಧಿಕಾರಿಗಳು ರಾಜ್ಯ ಮತ್ತು ಹೊರ ರಾಜ್ಯಗಳಿಗೂ ಚುನಾವಣೆ ಕಾರ್ಯಕ್ಕೆ ತೆರಳಿದ್ದರು. ಈಗ ಎಲ್ಲ ಅಧಿಕಾರಿಗಳು ವಾಪಸ್ ಬಂದಿದ್ದು, ಇಂದಿನಿಂದ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಕೆಲಸಗಳನ್ನು ಮಾಡಲಿದ್ದಾರೆ.

Leave a Reply

Your email address will not be published. Required fields are marked *