ನವದೆಹಲಿ: ಮಧ್ಯಪ್ರದೇಶದಲ್ಲಿ ‘ಮಾಮಾ’ ಎಂದೇ ಖ್ಯಾತರಾಗಿರುವ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಬಾರಿಯ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಪಡೆದಿದ್ದಾರೆ. 4 ಬಾರಿ ಸಿಎಂ ಹಾಗೂ 6 ಬಾರಿ ಸಂಸದರಾಗಿರುವ ಹೆಗ್ಗಳಿಕೆಯೂ ʻಮಾಮಾʼ ಹೆಸರಿನಲ್ಲಿದೆ
ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಇಂದು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. 1990ರಲ್ಲಿ ಬುಧ್ನಿಯಿಂದ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾದ ಶಿವರಾಜ್ ಸಿಂಗ್ ಚೌಹಾಣ್ ಅವರು ಬಿಜೆಪಿಯ ಪ್ರಬಲ ನಾಯಕರಾಗಿದ್ದಾರೆ. 90ರ ದಶಕದಲ್ಲಿ ಅಖಿಲ ಭಾರತ ಕೇಶರಿಯ ವಾಹಿನಿಯ ಸಂಚಾಲಕರಾಗಿ ರಾಜಕೀಯ ಜೀವನ ಆರಂಭಿಸಿದ್ದರು
ಬಳಿಕ ಶಿವರಾಜ್ ಸಿಂಗ್ ಚೌಹಾಣ್ 1990 ರಲ್ಲಿ ಬುಧ್ನಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಶಾಸಕರಾದರು. ಮುಂದಿನ ವರ್ಷ 1991 ರಲ್ಲಿ, ಅವರು 10 ನೇ ಲೋಕಸಭೆಯ ಚುನಾವಣೆಯಲ್ಲಿ ವಿದಿಶಾದಿಂದ ಗೆಲ್ಲುವ ಮೂಲಕ ಮೊದಲ ಬಾರಿಗೆ ಸಂಸದರಾದರು. 1996ರಲ್ಲಿ ಅವರು 11 ನೇ ಲೋಕಸಭೆ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದರು. ಜೊತೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದರು. ನಂತರ, ಚೌಹಾಣ್ ಅವರು 1996 ರಿಂದ 1997 ರವರೆಗೆ ಮಧ್ಯಪ್ರದೇಶದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದರು
1998ರಲ್ಲಿ, ಅವರು ಸತತ ಮೂರನೇ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಗೆದ್ದರು ಮತ್ತು ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ಉಪಸಮಿತಿ ಸದಸ್ಯರಾಗಿ ಕೆಲಸ ಮಾಡಿದರು. 13ನೇ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ಸಂಸತ್ತನ್ನು ತಲುಪಿದರು. ಇದೇ ವೇಳೆ ಅವರು ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿ ಮತ್ತು 2000 ರಿಂದ 2003ರವರೆಗೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದರು
ಡಿಸೆಂಬರ್ 2003ರ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶವನ್ನು ಬಿಜೆಪಿ ಗೆದ್ದಾಗ, ಶಿವರಾಜ್ ಸಿಂಗ್ ಹಾಲಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ವಿರುದ್ಧ ರಾಘೋಗಢದಿಂದ ಸ್ಪರ್ಧಿಸಿದರು. ಆದರೆ ಈ ಚುನಾವಣೆಯಲ್ಲಿ ʼಮಾಮಾʼ ಸೋತರು. ನಂತರ ಅವರು 2000 ರಿಂದ 2004 ರವರೆಗೆ ಸಂವಹನ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾದರು ಮತ್ತು 2004 ರಲ್ಲಿ ಐದನೇ ಬಾರಿಗೆ ಚುನಾವಣೆಯಲ್ಲಿ ಗೆದ್ದು 14 ನೇ ಲೋಕಸಭೆಯಲ್ಲಿ ಮತ್ತೊಮ್ಮೆ ಸಂಸದರಾದರು.
ಚುನಾವಣೆ ಬಳಿಕ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡದೇ ಇದ್ದಾಗ ಕೇಂದ್ರ ನಾಯಕತ್ವವು ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ದೆಹಲಿಗೆ ಕರೆಸಿ ಉನ್ನತ ಹುದ್ದೆ ನೀಡುತ್ತದೆ ಎಂಬ ಊಹಾಪೋಹವು ಪ್ರಾರಂಭವಾಯಿತು. ಚುನಾವಣೆ ಕಳೆದ ಬಳಿಕ ಹಾಗೇನೂ ಆಗಲಿಲ್ಲ. ಆದರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ, ಶಿವರಾಜ್ ಸಿಂಗ್ ಚೌಹಾಣ್ ಮತ್ತೊಮ್ಮೆ ವಿದಿಶಾದಿಂದ ಸ್ಪರ್ಧಿಸಿ 8,17,429 ಮತಗಳ ಅಂತರದಿಂದ ದೊಡ್ಡ ಗೆಲುವು ದಾಖಲಿಸಿದರು. ಇದು ಲೋಕಸಭೆ ಚುನಾವಣೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರ 6ನೇ ಗೆಲುವು