ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಮತ್ತು ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಗೆ ಸೋಮವಾರ (ಜೂ.10)ಕ್ಕೆ ಒಂದು ವರ್ಷ ತುಂಬುತ್ತಿದ್ದು, ಯೋಜನೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯ ಬಲವನ್ನು ಹೆಚ್ಚಿಸಿದೆ. ಯೋಜನೆಯ ಅಡಿಯಲ್ಲಿ ಸಾರಿಗೆ ಸಂಸ್ಥೆಯು ಪ್ರಸಕ್ತ 2023-24 ಆರ್ಥಿಕ ವರ್ಷದಲ್ಲಿ 3,349 ಕೋಟಿ ರೂಪಾಯಿ ದಾಖಲೆಯ ಆದಾಯವನ್ನು ಗಳಿಸಿದೆ.
KSRTC ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಮಾತನಾಡಿ, ಕೆಎಸ್ಆರ್ಟಿಸಿಯ ಒಟ್ಟು ಸಂಚಾರ ಆದಾಯ 2016 ರಲ್ಲಿ 2,738 ಕೋಟಿ ರೂ ಆಗಿತ್ತು. 2017 ರಲ್ಲಿ 2,975 ಕೋಟಿ ರೂ., 2018 ರಲ್ಲಿ 3,131 ಕೋಟಿ ರೂ., 2019 ರಲ್ಲಿ 3,182 ಕೋಟಿ ರೂ, 2021 ರಲ್ಲಿ ರೂ 2,037 ಕೋಟಿ ಮತ್ತು 2022 ರಲ್ಲಿ ರೂ 3,349 ಕೋಟಿಗಳು ಬಂದಿತ್ತು. ಶಕ್ತಿ ಯೋಜೆ ಜಾರಿಯಾದ ಬಳಿಕ ಅಂದರೆ 2023 ರ ಆದಾಯವು ರೂ 3,930 ಕೋಟಿಗೆ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.
2023ರ ಜೂನ್ನಿಂದ 2024ರ ಮೇ ವರೆಗೆ ಒಟ್ಟು 4,809 ಕೋಟಿ ರೂ.ಗಳ ಆದಾಯ ಬಂದಿದ್ದು, ಶಕ್ತಿಯೇತರ ಪ್ರಯಾಣಿಕರಿಂದಲೂ ಆದಾಯ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಶಕ್ತಿಯೋಜನೆಯಿಂದ ಆದಾಯ ಶೇ.42.5 (ರೂ. 2,044 ಕೋಟಿ) ಇದ್ದರೆ, ಶಕ್ತಿಯೇತರ ಆದಾಯ ಶೇ.57.5 (ರೂ. 2,764 ಕೋಟಿ)ರಷ್ಟಿದೆ. ಓರ್ವ ಮಹಿಳಾ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಲು ಮುಂದಾದಾದರೆ, ಮಕ್ಕಳು ಹಾಗೂ ಪತಿ ಕೂಡ ಬಸ್ ಹತ್ತುತ್ತಿದ್ದಾರೆ. ಇದರಿಂದ ಆದಾಯ ಹೆಚ್ಚಳವಾಗುತ್ತಿದೆ ಎಂದು ವಿವರಿಸಿದ್ದಾರೆ.