ತುಮಕೂರು: ಮಾಜಿ ಸಿಎಂ BS ಯಡಿಯೂರಪ್ಪನವರಿಗೆ ಪೋಕ್ಸೋ ಪ್ರಕರಣ ಸುತ್ತಿಕೊಳ್ಳುವ ಲಕ್ಷಣ ಕಾಣುತ್ತಿದೆ. ಪೋಕ್ಸೋ ಪ್ರಕರಣದಲ್ಲಿ ಬಂಧನವಾಗಲಿದೆಯೇ ಎಂಬ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಅಗತ್ಯವಿದ್ದರೆ ಸಿಐಡಿಯವರು ಯಡಿಯೂರಪ್ಪರನ್ನು ಬಂಧಿಸಲಿದ್ದಾರೆ. ಯಡಿಯೂರಪ್ಪ ಬಂದು ನೊಟೀಸ್ ಗೆ ಉತ್ತರ ನೀಡಬೇಕಾಗುತ್ತದೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿ ಜೂನ್ 15ರೊಳಗೆ ಚಾರ್ಜ್ಶೀಟ್ ಸಲ್ಲಿಸಬೇಕು ಎಂದು ಇದೆ. ಹೀಗಾಗಿ ಯಡಿಯೂರಪ್ಪನವರಿಗೆ ತನಿಖೆಗೆ ಬರಲು ನೊಟೀಸ್ ಕಳುಹಿಸಿದ್ದಾರೆ. ಅಗತ್ಯಬಿದ್ದರೆ ಸಿಐಡಿಯವರು ಯಡಿಯೂರಪ್ಪನವರನ್ನು ಬಂಧಿಸುತ್ತಾರೆ. ಈ ಬಗ್ಗೆ ನಾನು ಏನೂ ಹೇಳಲು ಆಗದು ಎಂದರು.
ಯಡಿಯೂರಪ್ಪ ಅವರನ್ನು ಮತ್ತೆ ಬಂಧಿಸಿ ಜೈಲಿಗೆ ಕಳುಹಿಸಲು ಸರ್ಕಾರ ಸಿದ್ಧತೆ ನಡೆಸಿದೆಯೇ ಎಂಬ ವದಂತಿಗಳು ದಟ್ಟವಾಗಿದೆ. ಮೂರು ತಿಂಗಳ ಹಿಂದೆ, ಲೋಕಸಭಾ ಚುನಾವಣೆಗೂ ಮೊದಲು ದಾಖಲಾಗಿದ್ದ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಚುನಾವಣೆಯ ಫಲಿತಾಂಶದ ನಂತರ ದಿಢೀರ್ ಬೆಳವಣಿಗೆ ಕಂಡಿದ್ದು, ಯಡಿಯೂರಪ್ಪ ಅವರನ್ನು ಬಂಧಿಸುವ ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಈ ಪ್ರಕರಣ ಸಂಬಂಧ ಯಡಿಯೂರಪ್ಪ ಅವರಿಗೆ ಸಿಐಡಿ ದಿಢೀರ್ ನೋಟಿಸ್ ನೀಡಿ ಬುಧವಾರವೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಇನ್ನೊಂದೆಡೆ ಇದೇ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಆದೇಶ ಕೋರಿ ಹೈಕೋರ್ಟ್‌ನಲ್ಲಿ ಸಂತ್ರಸ್ತೆ ಕುಟುಂಬ ಮನವಿ ಮಾಡಿದೆ