ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಒಂದು ವಾರ ಕಳೆದಿದೆ. ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 20,941 ಮತಗಳ ಮುನ್ನಡೆ ಪಡೆಯುವ ಮೂಲಕ ಸೋತ ನೆಲದಲ್ಲಿಯೇ ಮತ್ತೆ ಮನ್ನಣೆಗಳಿಸಿದ್ದಾರೆ.
ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಲೀಡ್ ದೊರೆತಿರುವುದಕ್ಕೆ ನಾನಾ ರೀತಿಯ ಚರ್ಚೆಗಳು, ವಿಶ್ಲೇಷಣೆಗಳು ನಡೆಯುತ್ತಿವೆ. ಆದರೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾತ್ರ ಫಲಿತಾಂಶ ಪ್ರಕಟವಾಗಿ ಒಂದು ವಾರ ದಾಟಿದರೂ ಚಿಕ್ಕಬಳ್ಳಾಪುರಕ್ಕೆ ಕಾಲಿಟ್ಟಿಲ್ಲ. ಇದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೂ ಕಾರಣವಾಗಿದೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಕೆ.ಸುಧಾಕರ್ ಒಂದು ಮತ ಹೆಚ್ಚು ಪಡೆದರೂ ರಾಜೀನಾಮೆ ನೀಡುವೆ. ಸುಧಾಕರ್ ಅವರನ್ನು ಪಾರ್ಲಿಮೆಂಟ್ ಮೆಟ್ಟಿಲು ಹತ್ತಲು ಬಿಡುವುದಿಲ್ಲ ಎಂದು ಬಿಡುಬೀಸಾಗಿ ಪ್ರದೀಪ್ ಈಶ್ವರ್ ಹೇಳಿಕೆಗಳನ್ನು ನೀಡಿದ್ದರು. ಚುನಾವಣೆಯ ಸಂದರ್ಭದಲ್ಲಿ ಅವರು ನೀಡಿದ್ದ ಈ ಹೇಳಿಕೆಗಳು ಫಲಿತಾಂಶದ ತರುವಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟ್ರೋಲ್ ಆಗುತ್ತಿದೆ. ಮತ್ತೊಂದು ಕಡೆ ‘ಮಹಾಜ್ಞಾನಿಗಳ ಬಗ್ಗೆ ಮಾತನಾಡುವುದಿಲ್ಲ’ ಎಂದು ಸುಧಾಕರ್ ತಿಳಿಸಿದ್ದಾರೆ. ಮಾತಿನ ಮೂಲಕವೇ ಗಮನ ಸೆಳೆಯುತ್ತಿದ್ದ ಪ್ರದೀಪ್ ಈಶ್ವರ್ ಮೌನವಾಗಿದ್ದಾರೆ.
ಫಲಿತಾಂಶದ ತರುವಾಯ ಇತ್ತೀಚೆಗೆ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ರಕ್ಷಾ ರಾಮಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಮ್ ಹಾಗೂ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ನೂತನ ಸಂಸದ ಡಾ.ಕೆ.ಸುಧಾಕರ್ ಅವರಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ಕಾಂಗ್ರೆಸ್ ಸೋಲಿಗೆ ಕಾರಣಗಳನ್ನು ಬಿಚ್ಚಿಟ್ಟರು. ‘ಸೋಲಿನಿಂದ ಧೃತಿಗೆಡದಿರಿ’ ಎಂದು ಪಕ್ಷದ ಕಾರ್ಯಕರ್ತರಿಗೆ ಸಚಿವರು ಆತ್ಮಸ್ಥೈರ್ಯ ತುಂಬಿದರು.
‘ಜಿಲ್ಲೆಯ ಎಲ್ಲ ಕ್ಷೇತ್ರಗಳು ಅಭಿವೃದ್ಧಿಯಾಗುತ್ತಿವೆ. ಚಿಕ್ಕಬಳ್ಳಾಪುರ ಕ್ಷೇತ್ರ ಅಭಿವೃದ್ಧಿಯಿಲ್ಲ. ರಕ್ಷಾ ರಾಮಯ್ಯ, ಎಂ.ಆರ್.ಸೀತಾರಾಮ್ ಕ್ಷೇತ್ರದ ನೇತೃತ್ವವಹಿಸಬೇಕು. ಸಹಕಾರ ನೀಡಲು ಸಿದ್ಧ’ ಎಂದು ಸಚಿವರ ಸಮ್ಮುಖದಲ್ಲಿಯೇ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಂದಿ ಆಂಜನಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ ಗೆಲುವಿನ ನಂತರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗಲಾಟೆಗಳು ಹೆಚ್ಚಿವೆ. ಮಂಡಿಕಲ್ಲು ಮತ್ತು ಕಣಜೇನಹಳ್ಳಿಯಲ್ಲಿ ಗಲಾಟೆ ನಡೆದಿವೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೇಶವರೆಡ್ಡಿ ಹಾಗೂ ಮುಖಂಡರು ಆರೋಪಿಸಿದ್ದಾರೆ.
ಶಾಸಕರ ಮನೆಯ ಮೇಲೆ ಕಲ್ಲು ತೂರಾಟ ಸಹ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ನ ಕೆಲವು ಮುಖಂಡರು ಬಹಿರಂಗವಾಗಿಯೇ ಶಾಸಕರ ವರ್ತನೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಕಡೆ ಲೋಕಸಭೆ ಚುನಾವಣೆಯಲ್ಲಿ ಶಾಸಕರನ್ನು ಕಡೆಗಣಿಸಲಾಗಿದೆ. ಅವರಿಗೆ ಯಾವುದೇ ಜವಾಬ್ದಾರಿ ನೀಡಲಿಲ್ಲ. ಬೇರೆಯವರನ್ನು ನೆಚ್ಚಿಕೊಂಡು ಮುನ್ನಡೆದರು. ಆ ಕಾರಣದಿಂದ ಸೋಲು ಆಯಿತು ಎಂದು ಬೆಂಬಲಿಗರು ಪ್ರದೀಪ್ ಈಶ್ವರ್ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.