ಸ್ವಕ್ಷೇತ್ರ ಕಾಶಿಗೆ ಪ್ರಧಾನಿ ಮೋದಿ ಭೇಟಿ

ವಾರಾಣಸಿ (ಉತ್ತರ ಪ್ರದೇಶ) : ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರವಾದ ಕಾಶಿಗೆ ಇಂದು ಭೇಟಿ ನೀಡುತ್ತಿದ್ದಾರೆ. ಅವರು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಗರಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಹಾಗಾಗಿ ಅವರ ಆಗಮನದ ಹಿನ್ನೆಲೆ ದೇಗುಲದ ಆಡಳಿತ ಮಂಡಳಿ ಎಲ್ಲ ರೀತಿಯ ಸಿದ್ಧತೆ ನಡೆಸಿದೆ.

ಈ ಪ್ರವಾಸ ಮೊದಲಿಗೆ ರೈತ ಸಮಾವೇಶದಿಂದ ಆರಂಭವಾಗಲಿದ್ದು, ಭೇಟಿ ವೇಳೆ ಮೋದಿ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತು ಕೂಡ ಬಿಡುಗಡೆ ಮಾಡಲಿದ್ದಾರೆ. ಮೆಹಂದಿಗಂಜ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಪಿಎಂಒ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ

ಕೃಷಿ ಸಖಿಗಳಾಗಿ ತರಬೇತಿ ಪಡೆದ 30 ಸಾವಿರಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಸದಸ್ಯರಿಗೆ ಪ್ರಮಾಣ ಪತ್ರ ನೀಡಿ, ಕಾಶಿಯಿಂದ ಡಿಜಿಟಲ್ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಕೆಸಿ) ಕೂಡ ಬಿಡುಗಡೆ ಮಾಡಲಿದ್ದಾರೆ. ಇದೇ ಸಮಾವೇಶದಲ್ಲಿ ಪ್ರಧಾನಿ ಮೋದಿ ರೈತರೊಂದಿಗೆ ಸಂವಾದ ನಡೆಸುವುದು ಮಾತ್ರವಲ್ಲದೇ ಅವರ ಸ್ಟಾಲ್‌ಗಳಿಗೆ ಭೇಟಿ ನೀಡಿ ಅವರು ಬೆಳೆದ ಉತ್ಪನ್ನಗಳನ್ನು ಕೂಡ ವೀಕ್ಷಿಸಲಿದ್ದಾರೆ. ಕಿಸಾನ್ ಸಂವಾದ ಕಾರ್ಯಕ್ರಮದಡಿ 21 ರೈತರೊಂದಿಗೆ ನೇರವಾಗಿ ಕೂಡ ಸಂವಾದ ನಡೆಸಲಿದ್ದಾರೆ

ಕಾಶಿಯಲ್ಲಿರುವ ತಮ್ಮ ಮನೆಗೂ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಇದೆ. ತಮ್ಮ ಸ್ವಕ್ಷೇತ್ರ ವಾರಾಣಸಿಯ ಭೇಟಿ ಹಿನ್ನೆಲೆ ಭಾರೀ ಸಿದ್ಧತೆ ಕೈಗೊಳ್ಳಲಾಗಿದೆ . ಮೆಹಂದಿಗಂಜ್‌ನಲ್ಲಿ ನಡೆಯಲಿರುವ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ 50 ಸಾವಿರ ರೈತರು ಭಾಗವಹಿಸುವ ಸಾಧ್ಯತೆ ಇದೆ. ಡೋಲು, ಶಂಖ, ಡಮರು ದಳ ಮತ್ತು ಪುಷ್ಪವೃಷ್ಟಿ ಮಾಡುವ ಮೂಲಕ ಪ್ರಧಾನಿ ಮೋದಿಯವರಿಗೆ ಭವ್ಯ ಸ್ವಾಗತ ಕೋರಲಾಗುತ್ತದೆ. ಸ್ಥಳೀಯರು 100 ಕ್ವಿಂಟಾಲ್ ಗುಲಾಬಿ ನೀಡಿ ಅವರನ್ನು ಸ್ವಾಗತಿಸಲಿದ್ದಾರೆ ಎಂದು ಪಕ್ಷ ವಕ್ತಾರರು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *