ಕೊಚ್ಚಿ: ಕೊಚ್ಚಿಯ ಕಾಕ್ಕನಾಡ್ನಲ್ಲಿರುವ 15 ಅಂತಸ್ತಿನ ವಸತಿ ಕಟ್ಟಡವೊಂದರಲ್ಲಿ ಕಲುಷಿತ ನೀರು ಸೇವಿಸಿ 25 ಮಕ್ಕಳು ಸೇರಿದಂತೆ 300 ಕ್ಕೂ ಹೆಚ್ಚು ನಿವಾಸಿಗಳು ಅಸ್ವಸ್ಥಗೊಂಡಿರುವ ಘಟನೆ ಮಂಗಳವಾರ ವರದಿಯಾಗಿದೆ.
ಕುಡಿಯುವ ನೀರಿನಲ್ಲಿ ಕೋಲಿ ಫಾರ್ಮ್ ಅಂಶ ಇರುವ ಶಂಕೆಯಿದ್ದು, ಇದರಿಂದ ಜನರು ಅಸ್ವಸ್ಥರಾಗಿರಬಹುದು ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ಅಪಾರ್ಟ್ ಮೆಂಟ್ ನಲ್ಲಿ ಸುಮಾರು 1,000 ಫ್ಲ್ಯಾಟ್ ಗಳಿದ್ದು, ಎಲ್ಲಾ ಫ್ಲ್ಯಾಟ್ ಗಳ ಮೇಲೂ ಪರಿಣಾಮ ಬೀರಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
ಕಾಕ್ಕನಾಡು ಪುರಸಭಾ ಸದಸ್ಯ ಸಿ ಸಿ ವಿಜು ಮಾತನಾಡಿ, ಕುಡಿಯುವ ನೀರು ಕಲುಷಿತವಾಗಿರುವುದು ಘಟನೆಗೆ ಕಾರಣವೆಂದು ಶಂಕಿಸಲಾಗಿದೆ. ಇದೀಗ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯ ನಂತರವಷ್ಟೇ ಸ್ಪಷ್ಟ ಮಾಹಿತಿ ಸಿಗುತ್ತದೆ ಎಂದು ಹೇಳಿದ್ದಾರೆ.
ಅಪಾರ್ಟ್ ಮೆಂಟ್ ಕೇರಳ ಜಲ ಪ್ರಾಧಿಕಾರದಿಂದ ಒಂದು ಸಂಪರ್ಕವನ್ನು ಮಾತ್ರ ಹೊಂದಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.