ನವದೆಹಲಿ: NEET-UG ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದರ ಕುರಿತು ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಈ ವಿಷಯದಲ್ಲಿ 0.001% ರಷ್ಟು ನಿರ್ಲಕ್ಷ್ಯವಿದ್ದರೂ ಅದನ್ನು ಒಪ್ಪಿಕೊಂಡು ಸರಿಪಡಿಸಬೇಕು ಎಂದು ಎನ್ ಟಿಎ ಗೆ ಹೇಳಿದೆ.
“ಪರೀಕ್ಷಾ ಸಂಸ್ಥೆಯಾಗಿ, ನೀವು ನ್ಯಾಯಯುತವಾಗಿ ವರ್ತಿಸಬೇಕು. ತಪ್ಪಿದ್ದರೆ, ಹೌದು, ಇದು ತಪ್ಪು ಎಂದು ಹೇಳಿ, ಯಾರಿಗೆ ಸಂಬಂಧಿಸಿದಂತೆಯಾದರೂ 0.001% ನಿರ್ಲಕ್ಷ್ಯವಿದ್ದರೆ, ಅದನ್ನು ಸಂಪೂರ್ಣವಾಗಿ ಸರಿಪಡಿಸಿಕೊಳ್ಳಬೇಕು ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಎಸ್ವಿಎನ್ ಭಟ್ಟಿ ನೇತೃತ್ವದ ಉನ್ನತ ನ್ಯಾಯಾಲಯದ ದ್ವಿಸದಸ್ಯ ರಜಾಕಾಲದ ಪೀಠ ಹೇಳಿದೆ.
NEET-UG, 2024 ರಲ್ಲಿನ ಆಪಾದಿತ ಪೇಪರ್ ಸೋರಿಕೆ ಮತ್ತು ದುಷ್ಕೃತ್ಯಗಳಿಗೆ ಸಂಬಂಧಿಸಿದಂತೆ ಈ ಹೊಸ ಮನವಿಗಳ ಕುರಿತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಮತ್ತು ಕೇಂದ್ರದಿಂದ ವಿವರವಾದ ಪ್ರತಿಕ್ರಿಯೆಯನ್ನು ನೀಡುವಂತೆ ಕಠಿಣವಾದ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್ನ ಪೀಠ ಈ ಸಂಬಂಧ ನೋಟಿಸ್ ಜಾರಿ ಮಾಡಿದೆ.
ಮಕ್ಕಳು ಪರೀಕ್ಷೆಗಳಿಗೆ ತಯಾರಿ ನಡೆಸಿದ್ದಾರೆ ಮತ್ತು ಈ ಪರೀಕ್ಷೆಗಳಿಗೆ ತಯಾರಿ ನಡೆಸಲು ಅವರ ಶ್ರಮವನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಮತ್ತು ಎನ್ಟಿಎ ಪರವಾಗಿ ಹಾಜರಾದ ವಕೀಲರಿಗೆ ಸುಪ್ರೀಂ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಹೇಳಿದೆ.
NEET-UG ವಿರುದ್ಧ ಸಲ್ಲಿಸಲಾದ ಈ ಅರ್ಜಿಗಳನ್ನು ಪ್ರತಿಕೂಲ ದಾವೆಯಾಗಿ ತೆಗೆದುಕೊಳ್ಳಬೇಡಿ ಎಂದು ಮಾನವೀಯ ದೃಷ್ಟಿಕೋನದಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು NTA ಗೆ ಹೇಳಿದೆ. ನೀವು ಈ ಎಲ್ಲವನ್ನು ಜುಲೈ 8 ರಂದು ವಾದಿಸಬಹುದು, ಅದು ಪ್ರಕರಣದ ಮುಂದಿನ ವಿಚಾರಣೆಯ ದಿನಾಂಕವಾಗಿದೆ ಎಂದು ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಹೇಳಿದೆ.