ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಸೇರಿದಂತೆ ಹಲವು ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಹೀಗಾಗಿ ಆರೋಪಿಗಳನ್ನು ಗುರುವಾರ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದು, ನಟ ದರ್ಶನ್ ಜೈಲು ಸೇರಬೇಕಾಗುತ್ತಾ? ಅಥವಾ ಮತ್ತೆ ಪೊಲೀಸ್ ಕಸ್ಟಡಿ ಮುಂದುವರೆಯಲಿದೆಯಾ? ಎಂಬುದು ನಿರ್ಧಾರವಾಗಲಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೂನ್ 11ರಂದು ದರ್ಶನ್, ಪವಿತ್ರಾ ಗೌಡ ಮತ್ತಿತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈಗಾಗಲೇ ಪೊಲೀಸರು ಆರೋಪಿಗಳನ್ನು ಎರಡೆರಡು ಬಾರಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಳೆದ 10 ದಿನಗಳಿಂದಲೂ ಆರೋಪಿಗಳನ್ನು ಸ್ವ-ಇಚ್ಚಾ ಹೇಳಿಕೆ ದಾಖಲು, ಸ್ಥಳ ಮಹಜರು ಸೇರಿದಂತೆ ಪ್ರಕರಣದಲ್ಲಿ ಕೆಲ ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.
ಎಲ್ಲಾ 19 ಮಂದಿ ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದ್ದು, ಇಂದು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. ಆ ಪೈಕಿ ಕೆಲವು ಆರೋಪಿಗಳನ್ನು ಮತ್ತೊಮ್ಮೆ ಕಸ್ಟಡಿಗೆ ಕೇಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅದಾಗ್ಯೂ, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದರೆ ದರ್ಶನ್ ಹಾಗೂ ಟೀಂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಪಾಲಾಗಲಿದೆ.
ಈಗಾಗಲೇ 10 ದಿನಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಕಳೆದಿರುವ ದರ್ಶನ್ ಅವರನ್ನು ಇನ್ನೂ 4-5 ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಪೊಲೀಸರ ಮನವಿಗೆ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಲಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ, ನಟ ದರ್ಶನ್ ಜೈಲುಪಾಲಾಗಬೇಕಾಗುತ್ತದೆ