ನವದೆಹಲಿ: ನವದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಉಷ್ಣ ಅಲೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಉಷ್ಣ ಗಾಳಿಯಿಂದಾಗಿ ಜನರು ಆಘಾತಕ್ಕೊಳಗಾಗಿ ನಿಂತಲ್ಲೇ ಕುಸಿದುಬಿದ್ದು, ಉಸಿರು ಚೆಲ್ಲುತ್ತಿದ್ದಾರೆ. ಇದರ ಪರಿಣಾಮವಾಗಿ ದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಬರೋಬ್ಬರಿ 435 ಮಂದಿ ಉಷ್ಣ ಸಂಬಂಧಿ ವ್ಯಾಧಿಗಳಿಂದ ಸಾವನ್ನಪ್ಪಿದ್ದಾರೆ.
ದೆಹಲಿಯ ಅತೀದೊಡ್ಡ ಸ್ಮಶಾನವಾದ ನಿಗಮಬೋಧ್ ಘಾಟ್ ನಲ್ಲಿನ ಪರಿಸ್ಥಿತಿಯನ್ನು ಗಮನಿಸಿದರೆ, ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬಂತಹ ಭಾವನೆ ಮೂಡುತ್ತಿದೆ.
ಜೂನ್ 18 ಮತ್ತು 21 ನಡುವೆ 435 ಶವಗಳು ಸ್ಮಶಾನಕ್ಕೆ ಬಂದಿವೆ ಎಂದು ಸ್ಮಶಾನ ನಿರ್ವಹಣೆಯ ಅಧಿಕಾರಿಗಳು ಹೇಳಿದ್ದಾರೆ.
ಜೂನ್ 18 ರಂದು 97 ಮೃತದೇಹಗಳು ಅಂತಿಮ ವಿಧಿವಿಧಾನಕ್ಕೆ ಬಂದಿದ್ದವು. ಜೂನ್ 19 ರಂದು ನಿಗಮಬೋಧ ಘಾಟ್ನಲ್ಲಿ ಸುಮಾರು 142 ಚಿತೆಗಳನ್ನು ಸುಡಲಾಯಿತು. ಈ ಅಂಕಿ ಅಂಶವು ಇದೂವರೆಗೆ ಘಾಟ್ಗೆ ಬಂದ ದೇಹಗಳ ಸರಾಸರಿ ಸಂಖ್ಯೆಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಒಂದು ದಿನದಲ್ಲಿ 253 ಶವಸಂಸ್ಕಾರಗಳನ್ನು ನಡೆಸಲಾಗಿತ್ತು. ಇದೀಗ ಅದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ಉಷ್ಣಅಲೆಯಿಂದಲೇ ಈ ಸಾವುಗಳು ಸಂಭವಿಸಿವೆ ಎಂದು ಅಧಿಕೃತವಾಗಿ ಸರ್ಕಾರ ಹೇಳದಿದ್ದರೂ, ವಾತಾವರಣ ಪರಿಸ್ಥಿತಿಯನ್ನು ಗಮಿಸಿದರೆ ಈ ಸಾವುಗಳಿಗೆ ಉಷ್ಣ ಅಲೆಯೇ ಕಾರಣ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಒಂದು ದಿನದಲ್ಲಿ ಸರಾಸರಿ 55 ಶವಸಂಸ್ಕಾರಗಳು ನಡೆಯುತ್ತಿವೆ. ಚಳಿಗಾಲದಲ್ಲಿ ಈ ಸಂಖ್ಯೆ ಸ್ವಲ್ಪ ಹೆಚ್ಚಾಗುತ್ತದೆ. ಶವಸಂಸ್ಕಾರಕ್ಕೆ ಜನರು ಸಾಲುಗಟ್ಟಿ ನಿಲ್ಲುತ್ತಿರುವುದನ್ನು ನೋಡಿದರೆ ಕೋವಿಡ್ ಪರಿಸ್ಥಿತಿ ನೆನಪಿಗೆ ಬರುತ್ತಿದೆ ಎಂದು ನಿಗಮ್ ಬೋಧ್ ಸಂಚಲನ್ ಸಮಿತಿಯ ಉಸ್ತುವಾರಿ ಸುಮನ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಜೂನ್.16ರಿಂದ ಉಷ್ಣಅಲೆಯಿಂದಾಗಿ ಸಾವಿನ ಸಂಖ್ಯೆ ಏರಿಕೆಯಾಗಲು ಆರಂಭವಾಗಿತ್ತು. ಅಂದು ಘಾಟ್’ಗೆ 70 ಶವಗಳು ಅಂತ್ಯ ಸಂಸ್ಕಾರಕ್ಕೆ ಬಂದಿದ್ದವು. ನಂತರ ಈ ಸಂಖ್ಯೆ ಏರಿಕೆಯಾಗುತ್ತಲೇ ಇದ್ದವು. ಜೂನ್ 20 ರಂದು, ಘಾಟ್’ಗೆ 124 ಶವಗಳು ಬಂದಿದ್ದವು. ಆದಾಗ್ಯೂ, ಶುಕ್ರವಾರದ ಹವಾಮಾನ ಬದಲಾವಣೆ ಮತ್ತು ಬಿಸಿಲು ಕಡಿಮೆಯಾದ ಬಳಿಕ ಈ ಸಂಖ್ಯೆ 75ಕ್ಕೆ ಇಳಿಕೆಯಾಗಿತ್ತು ಎಂದು ತಿಳಿಸಿದ್ದಾರೆ.