ಸಿಎಂ-ಡಿಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್: ವಿಜಯೇಂದ್ರ ಭಾಷಾ ವೈಖರಿಗೆ ಹೈಕೋರ್ಟ್‌ ಕಿಡಿ

 ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಮನುಷ್ಯನ ನಾಲಿಗೆ ಮತ್ತು ಮೆದುಳು ನಡುವಿನ ಸೇತುವೆ ಕುಸಿಯಬಾರದು. ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ವಿರುದ್ಧ ಕೆಟ್ಟ ಭಾಷೆ ಬಳಸಬಾರದು ಎಂದು ಹೈಕೋರ್ಟ್‌ ಮೌಖಿಕವಾಗಿ ಶುಕ್ರವಾರ ಹೇಳಿತು

ಪ್ರಕರಣವೊಂದರ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಸಾಮಾಜಿಕ ಜಾಲತಾಣದ ಉಸ್ತುವಾರಿ ಪ್ರಶಾಂತ್‌ ಮಾಕನೂರು ಸಲ್ಲಿಸಿದ್ದ ಅರ್ಜಿ ವಿಚಾರಣೆನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಏಕಸದಸ್ಯ ಪೀಠ ನಡೆಸಿತು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಂಚಿಕೊಂಡ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಪ್ರಶಾಂತ್‌ ಮಾಕನೂರು ಅವರ ನಡೆಗೆ ನ್ಯಾಯಾಲಯ ಅತೃಪ್ತಿ ವ್ಯಕ್ತಪಡಿಸಿತು.

ಅರ್ಜಿದಾರರ ವಿರುದ್ಧ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಜೊತೆಗೆ ಪ್ರತಿವಾದಿಯಾಗಿರುವ ಮಲ್ಲೇಶ್ವರ ಠಾಣಾ ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ

ಇದಕ್ಕೂ ಮುನ್ನ, ಪ್ರಕರಣದಲ್ಲಿ ಬಿಜೆಪಿ ರಾಜ್ಯಘಟಕದ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ರಾಜ್ಯದ ಸಿಎಂ ಮತ್ತು ಡಿಸಿಎಂ ಹಾಗೂ ಸಂಸದ ರಾಹುಲ್‌ ಗಾಂಧಿ ವಿರುದ್ಧ ಬಳಸಿರುವ ಭಾಷೆಯ ಕುರಿತು ಅರ್ಜಿದಾರರ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ವಿರುದ್ಧ ಕೆಟ್ಟ ಭಾಷೆ ಬಳಸಬಾರದು. ಗೌರವದ ಹಾಗೂ ಸುಂದರ ಭಾಷೆ ಬಳಸಬೇಕು. ಮಾತಿನಲ್ಲಿ ಪ್ರೀತಿ, ಜವಾಬ್ದಾರಿ, ಸೌಜನ್ಯ ಹಾಗೂ ಸಂಯಮ ಇರಬೇಕು. ಚುನಾವಣೆ ಸಂದರ್ಭದಲ್ಲಿ ಏನೇನೋ ಮಾತನಾಡಿ ಜನರನ್ನು ಉದ್ವೇಗಕ್ಕೆ ಗುರಿಪಡಿಸಬಾರದು. ಎಚ್ಚರಿಕೆಯಿಂದ ಮಾತನಾಡಬೇಕು. ನಾಲಿಗೆ ಮತ್ತು ಮೆದುಳಿನ ನಡುವಿನ ಸೇತುವೆ ಕುಸಿಯಬಾರದು ಎಂದು ಸಲಹೆ ನೀಡಿದರು

ಚುನಾವಣೆ ವೇಳೆ ಕೆಲವೊಂದು ಅಹಿತಕರ ಘಟನೆ ನಡೆದಿರುವುದು ನಿಜ. ಅವುಗಳನ್ನು ಸರ್ಕಾರ ಸಹ ಖಂಡಿಸುತ್ತದೆ. ಆದರೆ, ಸಾರ್ವಜನಿಕವಾಗಿ ಸಿಎಂ ಹಾಗೂ ಡಿಸಿಎಂ ಅವರನ್ನು ನಿಂದಿಸುವುದು ಸರಿಯಲ್ಲ. ಹಾಗಾಗಿ, ವಿಚಾರಣೆಗೆ ಹಾಜರಾಗಲು ಅರ್ಜಿದಾರರಿಗೆ ಸೂಚಿಸುವುದಿಲ್ಲ. ಆದರೆ, ತನಿಖೆ ಮುಂದುವರಿಯಲು ಅನುಮತಿ ನೀಡಬೇಕು ಎಂದು ಸರ್ಕಾರದ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಕೋರಿದರು

Leave a Reply

Your email address will not be published. Required fields are marked *