ಬೆಂಗಳೂರು: ಮಹಿಳೆಯೊಬ್ಬರ ಮನೆಯ ಸ್ವಿಚ್ ಬೋರ್ಡ್ನಲ್ಲಿ ಮೊಬೈಲ್ ಇಟ್ಟು ಆಕೆಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದಿದ್ದ ಶಿವಮೊಗ್ಗ ಮೂಲದ ಎಲೆಕ್ಟ್ರಿಷಿಯನ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ತನ್ನ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಎಲೆಕ್ಟ್ರಿಷಿಯನ್ ಎಸ್.ವೀರಭದ್ರಸ್ವಾಮಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಆಲಿಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಮೇಲ್ನೋಟಕ್ಕೆ ಇದು ವಾಯರಿಸಂ (ಲೈಂಗಿಕ ದರ್ಶನದ ತೃಪ್ತಿ) ಪ್ರಕರಣದಂತೆ ಇದ್ದು, ಅದರಲ್ಲಿಆರೋಪಿ ಕನಿಷ್ಠ ವಿಚಾರಣೆಯನ್ನು ಎದುರಿಸಲಿ ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರ ಮೊಬೈಲ್ನಲ್ಲಿ ಯಾವುದೇ ಚಿತ್ರಗಳನ್ನು ಅಥವಾ ವಿಡಿಯೊಗಳನ್ನು ಸೆರೆ ಹಿಡಿದಿರಲಿಲ್ಲವೆಂದು ಹೇಳಿದ್ದಾರೆ. ಇದು ವಿಚಾರಣೆಯಲ್ಲಿ ದೃಢಪಡಬೇಕಾಗಿದೆ. ಜತೆಗೆ ಯಾವುದೇ ವ್ಯಕ್ತಿ ತಮ್ಮ ಮೊಬೈಲ್ಗಳಲ್ಲಿ ಮಹಿಳೆಯರ ಖಾಸಗಿ ಚಿತ್ರಗಳನ್ನು ನೋಡುವುದು ಅಥವಾ ಸೆರೆಹಿಡಿಯುವುದನ್ನು ಮಾಡಿದರೆ ಅದು ವಾಯರಿಸಂ ಕೃತ್ಯ ಎಸಗಿದಂತೆ. ಹಾಗಾಗಿ ಅಂತಹ ಗಂಭೀರ ಆರೋಪ ಇರುವುದರಿಂದ ಪ್ರಕರಣ ರದ್ದುಗೊಳಿಸಲಾಗದು ಎಂದು ಪೀಠ ತಿಳಿಸಿದೆ