ಅಯೋಧ್ಯೆ: ಜನವರಿ 22ರಂದು ಲೋಕಾರ್ಪಣೆಗೊಂಡ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ಶನಿವಾರ ಭಾರೀ ಮಳೆಗೆ ಸೋರಿಕೆ ಕಂಡುಬಂದಿದೆ. ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಮಳೆ ನೀರು ಸೋರಿಕೆ ಖಚಿತಪಡಿಸಿದ್ದು, ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಲೋಪವಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಮಳೆಗೆ ದೇವಾಲಯದ ಗರ್ಭಗುಡಿಯ ಮೇಲ್ಛಾವಣಿಯಿಂದ ಭಾರೀ ನೀರು ಸೋರಿಕೆಯಾಗಿದೆ. ಮಳೆಗೆ ದೇವಸ್ಥಾನದ ಪವಿತ್ರ ಗರ್ಭಗುಡಿಯ ಚಾವಣಿಯಿಂದ ತೀವ್ರ ಸೋರಿಕೆಯಾಗಿದೆ. ಬಾಲರಾಮನ ವಿಗ್ರಹದ ಮುಂದೆ ಅರ್ಚಕರು ಕೂರುವ ಸ್ಥಳದಲ್ಲಿ, ವಿಐಪಿ ದರ್ಶನಕ್ಕಾಗಿ ಜನರು ಬರುವ ಸ್ಥಳದಲ್ಲಿಯೂ ನೀರು ಬೀಳುತ್ತಿದೆ. ಮಳೆಯ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯೂ ಇಲ್ಲ. ಹಿರಿಯ ಅಧಿಕಾರಿಗಳು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಚಾರ್ಯ ಸತ್ಯೇಂದ್ರ ದಾಸ್ ಆಗ್ರಹಿಸಿದ್ದಾರೆ
ದೇಶದ ಮೂಲೆ ಮೂಲೆಯಿಂದ ಬಂದ ಇಂಜಿನಿಯರುಗಳು ಶ್ರೀರಾಮ ಮಂದಿರ ನಿರ್ಮಿಸುತ್ತಿರುವುದು ಬಹಳ ಅಚ್ಚರಿ ಮೂಡಿಸುತ್ತಿದೆ. ಜನವರಿ 22ರಂದು ಮಂದಿರವನ್ನು ಉದ್ಘಾಟಿಸಲಾಗಿತ್ತು. ಆದರೆ ಮಳೆ ಬಂದರೆ ಚಾವಣಿ ಸೋರಲಿದೆ ಅಂತ ಯಾರಿಗೂ ತಿಳಿದಿರಲಿಲ್ಲ. ವಿಶ್ವ ಪ್ರಸಿದ್ಧ ದೇವಸ್ಥಾನದ ಚಾವಣಿ ಸೋರುತ್ತಿರುವುದು ಅಚ್ಚರಿಯ ವಿಷಯ. ಇದು ಏಕೆ ಆಯಿತು? ದೊಡ್ಡ ದೊಡ್ಡ ಇಂಜಿನಿಯರುಗಳಿದ್ದೂ ಇಂತಹ ಘಟನೆ ನಡೆದಿರುವುದು ದೊಡ್ಡ ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಾಲರಾಮನ ವಿಗ್ರಹ ಪ್ರತಿಷ್ಠಾಪಿಸಲಾದ ಗರ್ಭಗುಡಿಯ ಮೇಲ್ಚಾವಣಿ, ಶನಿವಾರ ರಾತ್ರಿ ಸುರಿದ ಮಳೆಗೆ ನೀರು ಸೋರಿಕೆಯಾಗಿದೆ. ಹೀಗಾಗಿ ಗರ್ಭಗುಡಿಯಲ್ಲಿ ನೀರು ತುಂಬಿಕೊಂಡಿದ್ದು, ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಮಂದಿರ ನಿರ್ವಹಣಾ ಸಿಬ್ಬಂದಿ ಸೋರಿಕೆಯಾಗಿರುವ ಗರ್ಭಗುಡಿಯ ಮೇಲ್ಚಾವಣೆ ಸರಿಪಡಿಸಲು ಕ್ರಮ ಕೈಗೊಂಡಿದ್ದಾರೆ.
ಮೇಲ್ಛಾವಣಿ ಸೋರಿಕೆ ಬಗ್ಗೆ ದೇವಾಲಯದ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರಿಗೆ ತಿಳಿಸಿದ ಬಳಿಕ ದುರಸ್ತಿ ಕಾರ್ಯಕ್ಕೆ ಸೂಚನೆ ನೀಡಿದ್ದಾರೆ. ಜೊತೆಗೆ ಅದನ್ನು ವಾಟರ್ಫ್ರೂಫ್ಗೊಳಿಸಲು ತಾಕೀತು ಮಾಡಿದ್ದಾರೆ
ಗರ್ಭಗುಡಿಯಲ್ಲಿ ಮಳೆ ನೀರು ಸೋರಿಕೆ ಖಚಿತಪಡಿಸಿರುವ ಮಂದಿರ ನಿಮಾರ್ಣ ಉಸ್ತುವಾರಿ ಹೊತ್ತಿದ್ದ ನೃಪೇಂದ್ರ ಮಿಶ್ರಾ ಅವರು, ಗುರು ಮಂಟಪ ಇರುವ ಮೊದಲ ಮಹಡಿಗೆ ಯಾವುದೇ ಮೇಲ್ಚಾವಣಿ ಇಲ್ಲ. ಮಳೆ ನೀರು ತುಂಬಿಕೊಂಡು ಗರ್ಭಗುಡಿಯಲ್ಲಿ ಸೋರಿಕೆಯಾಗಿದೆ. ಶೀಘ್ರವೇ ದುರಸ್ತಿ ಮಾಡಲಾಗುತ್ತದೆ. ಗರ್ಭಗುಡಿ ನಿರ್ಮಾಣದಲ್ಲಿ ಯಾವುದೇ ಲೋಪವಾಗಿಲ್ಲ. ಗುರುಮಂಟಪಕ್ಕೆ ಮೇಲ್ಚಾವಣಿ ಇಲ್ಲದ ಕಾರಣ ನೀರು ಸೋರಿಕೆಯಾಗಿದೆ. ಮೊದಲ ಮಹಡಿಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದು ಈ ವರ್ಷದ ಜುಲೈ ವೇಳೆಗೆ ಅಂತ್ಯಗೊಳ್ಳಲಿದೆ. ಡಿಸೆಂಬರ್ ಕೊನೆಗೆ ದೇವಸ್ಥಾನ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ