ಪೆನ್​ಡ್ರೈವ್ ಹಂಚಿಕೆ ಆರೋಪ: ಪ್ರೀತಂ ಗೌಡ ವಿರುದ್ಧ FIR

ಬೆಂಗಳೂರು: ಅಶ್ಲೀಲ ವಿಡಿಯೋ ಇರುವ ಪೆನ್​ಡ್ರೈವ್​​ ಹಂಚಿಕೆ ಆರೋಪ ಪ್ರಕರಣ ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಂ ಗೌಡ ಅವರಿಗೆ ಸಂಕಷ್ಟ ತರುವ ಸಾಧ್ಯತೆ ಕಂಡುಬಂದಿದೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಸಿಐಡಿ ಸೈಬರ್ ಠಾಣೆಯಲ್ಲಿ ಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಜೆಡಿಎಸ್‌ ಮಾಜಿ ಸಂಸದ ಪ್ರಜ್ವಲ್​​ ರೇವಣ್ಣ, ಕಿರಣ್​, ಶರತ್​ ಹಾಗೂ ಪ್ರೀತಂ ಗೌಡ ವಿರುದ್ಧ ಐಪಿಸಿ ಸೆಕ್ಷನ್ 354(ಎ)-ಲೈಂಗಿಕ ಕಿರುಕುಳ, 354 (ಡಿ) ಮಹಿಳೆಯ ನಿರಾಸಕ್ತಿಯ ಹೊರತಾಗಿಯೂ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಿರುವುದು, 354 ಬಿ-ಮಹಿಳೆ ಮೇಲೆ ಆಕ್ರಮಣ ಹಾಗೂ ಮಾಹಿತಿ, 506-ಜೀವ ಬೆದರಿಕೆ ಹಾಗೂ ಐಟಿ ಕಾಯ್ದೆಯಡಿ ಕೇಸು ದಾಖಲಾಗಿದೆ.

ಪ್ರಜ್ವಲ್​ ವಿರುದ್ಧ ಹೊಳೆನರಸೀಪುರ, ಕೆ.ಆರ್.ನಗರ, ಸಿಐಡಿ ಸೈಬರ್ ಠಾಣೆಯಲ್ಲಿ ಎರಡು ಪ್ರಕರಣಗಳು ಸೇರಿದಂತೆ ಒಟ್ಟು ನಾಲ್ಕು ಪ್ರಕರಣ ದಾಖಲಾಗಿದೆ. ನಾಲ್ಕನೇ ಪ್ರಕರಣದಲ್ಲಿ ಪ್ರಜ್ವಲ್ ಮೊದಲ‌ ಆರೋಪಿಯಾದರೆ, ಪ್ರೀತಂ ಗೌಡ ನಾಲ್ಕನೇ ಆರೋಪಿಯಾಗಿದ್ದಾರೆ. ಹೀಗಾಗಿ, ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ಜಾರಿ ಮಾಡಿದ್ದು ಪ್ರೀತಂ ಗೌಡಗೆ ಬಂಧನ ಭೀತಿ ಎದುರಾಗಿದೆ.

ಈಗಾಗಲೇ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಡಿ ಬಂಧಿತರಾಗಿರುವ ಪ್ರಜ್ವಲ್​ಗೆ ನಾಲ್ಕನೇ ಪ್ರಕರಣ ಮತ್ತಷ್ಟು ತಲೆನೋವು ತಂದೊಡ್ಡಿದೆ.‌ ಮಹಿಳೆಯ ಇಚ್ಚೆಗೆ ವಿರುದ್ಧವಾಗಿ ವೀಡಿಯೊ ಮಾಡಿ ಕಿರುಕುಳ ನೀಡಲಾಗಿದೆ. ಖಾಸಗಿ ವೀಡಿಯೊ ಸೆರೆಹಿಡಿದು‌ ಪೆನ್​ಡ್ರೈವ್​ ಮೂಲಕ ಹರಿಬಿಡಲಾಗಿದೆ. ಇದಕ್ಕೆ ಮೂಲ ಕಾರಣ ಪ್ರಜ್ವಲ್ ಎಂದು ಸಂತ್ರಸ್ತೆ ದೂರಿದ್ದಾರೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *