ಬೆಂಗಳೂರು: ಹದಿನೇಳು ವರ್ಷದ ವಯಸ್ಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ನಾಲ್ವರ ವಿರುದ್ಧ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಯಡಿಯೂರಪ್ಪ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಇತ್ತೀಚಿಗಷ್ಟೇ ಅವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದಿದ್ದ ಸಿಐಡಿ ಅಧಿಕಾರಿಗಳು, ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ತ್ವರಿತಗತಿಯ ವಿಶೇಷ ನ್ಯಾಯಾಲಯಕ್ಕೆ ಗುರುವಾರ ಚಾರ್ಜ್ ಶೀಟ್ ಸಲ್ಲಿಸಿರುವುದಾಗಿ ಮೂಲಗಳು ಹೇಳಿವೆ
ಪ್ರಕರಣದ ಮೊದಲ ಆರೋಪಿ ಬಿ.ಎಸ್. ಯಡಿಯೂರಪ್ಪ, ಎರಡನೇ ಆರೋಪಿ ವೈ.ಎಂ. ಅರುಣ್, ಮೂರನೇ ಆರೋಪಿ ಎಂ. ರುದ್ರೇಶ್ ಹಾಗೂ ನಾಲ್ಕನೇ ಆರೋಪಿ ಜಿ. ಮರಿಸ್ವಾಮಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆರೋಪಿಗಳ ವಿರುದ್ಧ ದೋಷರೋಪ ಹೊರಿಸಿರುವ ನ್ಯಾಯಾಧೀಶ ಎನ್.ಎಂ. ರಮೇಶ್, ವಿಚಾರಣೆಯನ್ನು ಮುಂದೂಡಿದ್ದಾರೆ. ಮುಂದಿನ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳ ಪರ ವಕೀಲರು ಹಾಜರಾಗುವ ಸಾಧ್ಯತೆಯಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಬಾಲಕಿ ತಾಯಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು. ಅದನ್ನು ಗಮನಿಸಿದ್ದ ಬಿಎಸ್ ಯಡಿಯೂರಪ್ಪ, ಇತರೆ ಆರೋಪಿಗಳ ಸಹಾಯದಿಂದ ಬಾಲಕಿ ಹಾಗೂ ತಾಯಿಯನ್ನು ತಮ್ಮ ಮನೆಗೆ ಕರೆಯಿಸಿಕೊಂಡು, ಸೋಶಿಯಲ್ ಮೀಡಿಯಾಗಳಿದ್ದ ವಿಡಿಯೋ ಮತ್ತು ಫೋಟೋಗಳನ್ನು ಡಿಲೀಟ್ ಮಾಡಿಸಿದ್ದರು. ನಂತರ ಮೊಬೈಲ್ ನಲ್ಲಿರುವ ವಿಡಿಯೋ ಹಾಗೂ ಫೋಟೋಗಳನ್ನು ಕೂಡಾ ಡಿಲೀಟ್ ಮಾಡಿದ್ದರು. ಇದೇ ಸಂದರ್ಭದಲ್ಲಿ ಆರೋಪಿಗಳು ಬಾಲಕಿಯ ತಾಯಿಗೆ ರೂ. 2 ಲಕ್ಷ ನಗದು ನೀಡಿದ್ದರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಹಣ ಕೂಡಿಸಿದ್ದ ಮೂವರು ಆರೋಪಿಗಳಾದ ಅರುಣ್ ರುದ್ರೇಶ್, ಮರಿಸ್ವಾಮಿ ಕೃತ್ಯಕ್ಕೆ ಸಂಬಂಧಪಟ್ಟ ವಿಡಿಯೋವನ್ನು ನೋಡಿದ್ದರು. ಯಡಿಯೂರಪ್ಪ ಹೇಳಿದ್ದರೆಂದು ದೂರುದಾರ ಮಹಿಳೆಯನ್ನು ಸಂಪರ್ಕಿಸಿದ್ದರು. ನಂತರ ಅವರನ್ನು ಯಡಿಯೂರಪ್ಪ ಅವರ ಮನೆಗೆ ಕರೆಸಿಕೊಂಡು ಮಾತುಕತೆ ಆಗಿತ್ತು. ನಂತರ ದೂರುದಾರ ಮಹಿಳೆಗೆ ರೂ. 2 ಲಕ್ಷ ಕೊಡಿಸಿ ಕಳುಹಿಸಿದ್ದರು ಎಂಬ ಮಾಹಿತಿ ಆರೋಪ ಪಟ್ಟಿಯಲ್ಲಿದೆ.