ಹುಬ್ಬಳ್ಳಿ: ಶಾಲಾ ಬಾಲಕನ ಮೇಲೆ ಯುವಕರ ಗುಂಪು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎಸ್.ಶಶಿಕುಮಾರ್ ತಿಳಿಸಿದ್ದಾರೆ.
“ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಲಾ ಬಾಲಕನೊಬ್ಬನಿಗೆ ಐದಾರು ಜನ ಹುಡುಗರ ಗುಂಪೊಂದು ಗಲಾಟೆ ಮಾಡಿ ಹಲ್ಲೆ ಮಾಡುತ್ತಿರುವ ವಿಡಿಯೋ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಶಾಲಾ ಕಾಲೇಜುಗಳಲ್ಲಿ ಮತ್ತು ಮಕ್ಕಳ ಪೋಷಕರಲ್ಲಿ ಆತಂಕ ಉಂಟಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
“ಈ ಘಟನೆಗೆ ಸಂಬಂಧಪಟ್ಟಂತೆ ಆ ಶಾಲೆಯ ಪ್ರಾಂಶುಪಾಲರು ನೀಡಿದ ದೂರಿನನ್ವಯ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಶೋಕನಗರ ಪೊಲೀಸ್ ಠಾಣೆ ಪಿಐ ನೇತೃತ್ವದ ಸಿಬ್ಬಂದಿ ತಂಡ ತನಿಖೆ ಕೈಗೊಂಡಿತು. ತನಿಖೆ ವೇಳೆ ವಿಡಿಯೋದಲ್ಲಿದ್ದ ಹಲ್ಲೆ ಮಾಡಿದ ಹುಡುಗರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಆ ವೇಳೆ ಯುವತಿಯೊಂದಿಗೆ ಮಾತನಾಡುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಬಾಲಕರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿ ಹಲ್ಲೆ ನಡೆಸಿದ್ದಾರೆ ಎಂಬುದು ತಿಳಿದುಬಂದಿದೆ. ಹಲ್ಲೆ ಮಾಡಿದ ಬಾಲಕರು ಹುಬ್ಬಳ್ಳಿ ನಗರದ ವಿವಿಧ ಶಾಲಾ-ಕಾಲೇಜುಗಳಿಗೆ ಸೇರಿದ ವಿದ್ಯಾರ್ಥಿಗಳಾಗಿದ್ದು, ನಾಲ್ಕು ಜನ ಬಾಲಕರ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಹಾಗೂ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಮತ್ತೋರ್ವ ಆರೋಪಿ ಚಾಲುಕ್ಯ ನಗರದ ಫ್ರಾನ್ಸಿಸ್ ಉಡುಮಿಲ (19) ಎಂಬ ಆರೋಪಿ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗಿದೆ” ಎಂದು ಹೇಳಿದರು.
“ಘಟನೆಗೆ ಸಂಬಂಧಿಸಿದಂತೆ ಬಾಲಕರು ಮತ್ತು ಆರೋಪಿ ಓದುತ್ತಿದ್ದ ಶಾಲಾ-ಕಾಲೇಜಿನ ಪ್ರಾಂಶುಪಾಲ ಮತ್ತು ಪೋಷಕರ ಜೊತೆ ಸಭೆ ನಡೆಸಿದ್ದು, ಇನ್ನು ಮುಂದೆ ಯಾವುದೇ ರೀತಿ ಕಾನೂನು ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗದಂತೆ ವಿದ್ಯಾರ್ಥಿಗಳಿಗೆ ಸೂಕ್ತ ತಿಳುವಳಿಕೆ ಹೇಳುವಂತೆ ಸೂಚನೆ ನೀಡಲಾಗಿದೆ.