ಭಾರತ್ ಅಕ್ಕಿ ಯೋಜನೆಗೆ ಹೊಸ ನೀತಿ

ಬೆಂಗಳೂರು: ಮಹತ್ವಾಕಾಂಕ್ಷೆಯ ‘ಭಾರತ್ ಅಕ್ಕಿ’ ಯೋಜನೆಗೆ ಹೊಸ ಪಾಲಿಸಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳು ಶುರುವಾಗಿದ್ದು, ಶೀಘ್ರದಲ್ಲೇ ಪಾಲಿಸಿ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಬಿಪಿಎಲ್ ಕಾರ್ಡ್ನಲ್ಲಿ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ, ಅಂತ್ಯೋದಯ ಕಾರ್ಡ್ಗೆ 35 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ, ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ತಿಂಗಳು ಉಚಿತವಾಗಿ ವಿತರಿಸುತ್ತಿದೆ. ರಾಜ್ಯ ಸರ್ಕಾರ, ಎಪಿಎಲ್ ಕಾರ್ಡ್ಗೆ ಕೆಜಿಗೆ 15 ರೂ.ನಂತೆ 10 ಕೆಜಿ ಅಕ್ಕಿ ವಿತರಿಸುತ್ತಿತ್ತು. ಆದರೆ, ಮೂರು ತಿಂಗಳಿಂದ ಅಕ್ಕಿ ವಿತರಣೆಯನ್ನು ನಿಲ್ಲಿಸಿದೆ.

ರಾಜ್ಯದಲ್ಲಿ ಪಡಿತರ ಚೀಟಿಯೇ ಇಲ್ಲದ ಲಕ್ಷಾಂತರ ಕುಟುಂಬಗಳಿವೆ. ಬಡತನ ರೇಖೆಯಿಂದ ಕೆಳಗಿನ ಕುಟುಂಬದವರು ಸಂಖ್ಯೆ ಸಾಕಷ್ಟಿದೆ. ಹಾಗಾಗಿ, ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟ ಅಕ್ಕಿ ವಿತರಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಕಳೆದ ಫೆಬ್ರವರಿಯಲ್ಲಿ ದೇಶಾದ್ಯಂತ ಈ ಯೋಜನೆಯನ್ನು ಜಾರಿಗೆ ತಂದರು. ಅದರಂತೆ, ನ್ಯಾಷನಲ್ ಅಗ್ರಿಕಲ್ಚರ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್ (ನಾಫೆಡ್), ಕರ್ನಾಟಕದಲ್ಲಿ ರಿಯಾಯಿತಿ ದರದಲ್ಲಿ ‘ಭಾರತ್ ಅಕ್ಕಿ’, ‘ಬೇಳೆ’ ಮತ್ತು ಗೋಧಿ ಹಿಟ್ಟು ಮಾರಾಟ ಮಾಡುತ್ತಿತ್ತು.

ಆರಂಭದಲ್ಲಿ ರಾಜ್ಯದ ಕೆಲವೆಡೆ ಟೆಂಪೊಗಳಲ್ಲಿ ಸಾಮಗ್ರಿಗಳನ್ನು ತಂದು ಹೆಸರು, ಮೊಬೈಲ್ ಸಂಖ್ಯೆ ನಮೂದಿಸಿ 10 ಕೆಜಿ ಅಕ್ಕಿ, ಕೆಲವು ಜಿಲ್ಲೆಗಳಲ್ಲಿ ಹತ್ತು ಕೆಜಿ ಗೋಧಿ ಹಿಟ್ಟು ಬ್ಯಾಗ್ ಮಾರಾಟ ಮಾಡುತ್ತಿತ್ತು. ರಾಜ್ಯಾದ್ಯಂತ ಈವರೆಗೆ 40 ಸಾವಿರ ಮೆಟ್ರಿಕ್ ಅಕ್ಕಿ ಮಾರಾಟ ಮಾಡಿದೆ. ಭಾರತ್ ಅಕ್ಕಿಗೆ ಈಗಾಗಲೇ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಬಂದಿದೆ. ಆದರೆ, ಗೋದಾಮುಗಳಲ್ಲಿ ದಾಸ್ತಾನು ಇಲ್ಲದ ಪರಿಣಾಮ ಅಕ್ಕಿ ವಿತರಣೆಯನ್ನು ಸದ್ಯ ನಿಲ್ಲಿಸಲಾಗಿದೆ. ಯೋಜನೆ ಸಂಬಂಧಿಸಿದಂತೆ ಹೊಸ ಪಾಲಿಸಿ ತರಲು ಕೇಂದ್ರ ಸರ್ಕಾರ, ರೂಪುರೋಷ ಸಿದ್ಧಪಡಿಸಿಸುತ್ತಿದೆ. ಡಿ-ಮಾರ್ಟ್ ಸೇರಿ ಸೂಪರ್ ಮಾರ್ಕೆಟ್ಗಳಲ್ಲಿ ಮಾರಾಟ ಸೇರಿ ಇತರೆ ಅಂಶಗಳು ಪಾಲಿಸಿಯಲ್ಲಿವೆ ಎನ್ನಲಾಗಿದೆ.

ಯೋಜನೆ ವಿವರ

2024ರ ಫೆ.2ರಿಂದ ಆರಂಭ 40 ಸಾವಿರ ಟನ್ ಮಾರಾಟ ಅಕ್ಕಿ 29 ರೂ., ಗೋಧಿ ಹಿಟ್ಟು 27.50 ರೂ. ಕಡ್ಲೆಬೇಳೆ 60 ರೂ. ಅಕ್ಕಿ, ಗೋಧಿ ತಲಾ 10 ಕೆ.ಜಿ., ಕಡ್ಲೆಬೇಳೆ 5 ಕೆ.ಜಿ. ಬ್ಯಾಗ್.

ಸರ್ಕಾರಕ್ಕೆ ಆರ್ಥಿಕ ಹೊರೆ

ಕಳೆದ ವರ್ಷ ಮಳೆಯ ಕೊರತೆಯಿಂದಾಗಿ ಭತ್ತದ ಉತ್ಪಾದನೆ ಕುಂಠಿತಗೊಂಡಿದೆ. ಕಡಿಮೆ ದರದಲ್ಲಿ ಅಕ್ಕಿ ವಿತರಿಸುವುದು ಸರ್ಕಾರಕ್ಕೆ ಹೊರೆಯಾಗಿ ಪರಿಣಾಮಿಸುತ್ತಿದೆ ಎನ್ನಲಾಗಿದೆ.

ಗೋದಾಮುಗಳಲ್ಲಿ ದಾಸ್ತಾನು ಇಲ್ಲದ ಪರಿಣಾಮ ‘ಭಾರತ್ ಅಕ್ಕಿ’ ಮಾರಾಟವನ್ನು ಸದ್ಯ ನಿಲ್ಲಿಸಲಾಗಿದೆ. ಯೋಜನೆ ಸಂಬಂಧ ಕೇಂದ್ರ ಸರ್ಕಾರ ಹೊಸ ನೀತಿ ತರಲು ರೂಪುರೇಷ ಸಿದ್ಧಪಡಿಸುತ್ತಿದೆ. ಸದ್ಯದಲ್ಲೇ ಇದು ಜಾರಿಗೆ ಬರುವ ಸಾಧ್ಯತೆ ಇದೆ. ಪಾಲಿಸಿಯ ವಿವರ ನಮಗೆ ಸಿಕ್ಕಿಲ್ಲ – ವಿನಯ್ ಕುಮಾರ್, ಕರ್ನಾಟಕ ವಿಭಾಗದ ಮುಖ್ಯಸ್ಥ, ನಾಫೆಡ್.

Leave a Reply

Your email address will not be published. Required fields are marked *