ಚೆನ್ನೈ(ತಮಿಳುನಾಡು): ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಿನ ಮಹಿಳಾ ಟಿ-20 ಸರಣಿ 1-1 ಅಂತರದಿಂದ ಸಮಬಲದಲ್ಲಿ ಮುಕ್ತಾಯವಾಗಿದೆ. ಮೂರನೇ ಮತ್ತು ಅಂತಿಮ ಪಂದ್ಯವನ್ನು ಭಾರತೀಯ ವನಿತೆಯರು 10 ವಿಕೆಟ್ಗಳಿಂದ ಗೆದ್ದರು. ಹರಿಣ ಪಡೆ ಮೊದಲ ಪಂದ್ಯ ಗೆದ್ದರೆ, ಎರಡನೇ ಪಂದ್ಯ ಮಳೆಯಿಂದ ರದ್ದಾಗಿತ್ತು.
ಇಲ್ಲಿನ ಎಂ.ಎ.ಚಿದಂಬರಂ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಪೂಜಾ ವಸ್ತ್ರಾಕರ್ ಮತ್ತು ರಾಧಾ ಯಾದವ್ ಬೌಲಿಂಗ್ ದಾಳಿಗೆ ನಲುಗಿತು. ಹೀಗಾಗಿ, 17.1 ಓವರ್ಗಳಲ್ಲಿ ಕೇವಲ 84 ರನ್ಗಳಿಗೆ ಸರ್ವಪತನ ಕಂಡಿತು. ಈ ಅಲ್ಪ ಗುರಿಯನ್ನು ಭಾರತೀಯ ಆಟಗಾರ್ತಿಯರು ವಿಕೆಟ್ ನಷ್ಟವಿಲ್ಲದೇ ತಲುಪಿದರು.
ಮಂಧಾನ ಅರ್ಧಶತಕ: ಹರಿಣಗಳು ನೀಡಿದ್ದ 84 ರನ್ಗಳ ಗುರಿ ಬೆನ್ನಟ್ಟಿದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ನಿರಾಯಾಸವಾಗಿ ತಂಡಕ್ಕೆ ಗೆಲುವು ತಂದುಕೊಟ್ಟರು. ದೊಡ್ಡ ಹೊಡೆತಗಳ ಮೂಲಕ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಮಂಧಾನ 54 ರನ್ ಕಲೆ ಹಾಕಿದರು. ಮತ್ತೊಂದೆಡೆ, ಶಫಾಲಿ 27 ರನ್ ಗಳಿಸಿ ಅಜೇಯರಾಗುಳಿದರು.
40 ಎಸೆತಗಳನ್ನು ಎದುರಿಸಿದ ಮಂಧಾನ ಇನ್ನಿಂಗ್ಸ್ 8 ಬೌಂಡರಿ ಹಾಗೂ 2 ಸಿಕ್ಸರ್ಗಳನ್ನು ಒಳಗೊಂಡಿತ್ತು. ಹರಿಣಗಳು ಆರು ಬೌಲರ್ಗಳನ್ನು ಇಳಿಸಿದರೂ ವಿಕೆಟ್ ಕಬಳಿಸುವಲ್ಲಿ ವಿಫಲರಾದರು. ಅಂತಿಮವಾಗಿ, ಟೀಂ ಇಂಡಿಯಾ 10.5 ಓವರ್ಗಳಲ್ಲೇ ವಿಜಯದ ನಗೆ ಬೀರಿತು.