ಹಗರಣಗಳ ವಿರುದ್ಧ ಉಭಯ ಸದನಗಳಲ್ಲಿ ಹೋರಾಟ: ಬಿಜೆಪಿ ನಿರ್ಧಾರ

ಬೆಂಗಳೂರು: ಸೋಮವಾರದಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಆಡಳಿತ ಪಕ್ಷದ ವಿರುದ್ಧ ಸದನದ ಒಳಗೆ ಹೋರಾಟ ನಡೆಸುವ ಕುರಿತು ಮಹತ್ವದ ನಿರ್ಧಾರವನ್ನು ಬಿಜೆಪಿ ನಾಯಕರು ಕೈಗೊಂಡಿದ್ದಾರೆ. ಹಗರಣಗಳ ಪ್ರಸ್ತಾಪದ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು. ಉಭಯ ಸದನಗಳಲ್ಲಿಯೂ ಹಗರಣಗಳು, ಅಕ್ರಮದ ವಿರುದ್ಧ ಗಟ್ಟಿಯಾದ ನಿಲುವಿನೊಂದಿಗೆ ಹೋರಾಟ ನಡೆಸುವ ನಿರ್ಧಾರ ಮಾಡಿದ್ದಾರೆ.

ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಅನುಸರಿಸಬೇಕಿರುವ ಕಾರ್ಯತಂತ್ರ, ಪ್ರಮುಖವಾಗಿ ಪ್ರಸ್ತಾಪಿಸಬೇಕಿರುವ ವಿಷಯಗಳು ಹಾಗೂ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಇಂದು ನಗರದ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಹಿರಿಯ ಮುಖಂಡರಾದ ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ, ಸಿ.ಟಿ.ರವಿ, ಸುನಿಲ್ ಕುಮಾರ್, ರವಿಕುಮಾರ್, ಛಲವಾದಿ ನಾರಾಯಣ ಸ್ವಾಮಿ, ಅರವಿಂದ ಬೆಲ್ಲದ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿಯೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಗರಣಗಳ ಹುತ್ತ ಕಟ್ಟಿಕೊಂಡಿದ್ದು, ಇದರ ವಿರುದ್ಧ ಸಮರ್ಥವಾಗಿ ಸದನದಲ್ಲಿ ಹೋರಾಟ ನಡೆಸಬೇಕು ಎನ್ನುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಎಲ್ಲ ನಾಯಕರ ಅಭಿಪ್ರಾಯ ಆಲಿಸಿ ಉಭಯ ಸದನಗಳಲ್ಲಿಯೂ ಸಮಾನ ರೀತಿಯ ಹೋರಾಟ ನಡೆಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎನ್ನುವ ನಿರ್ಧಾರ ಮಾಡಲಾಯಿತು.

Leave a Reply

Your email address will not be published. Required fields are marked *