ರಾಮನಗರ: ಬೆಂಗಳೂರಿನ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕನಕಪುರ ಅಥವಾ ಮೈಸೂರು ಮಾರ್ಗದ ಸೂಕ್ತ ಪ್ರದೇಶ ಆಯ್ಕೆ ಮಾಡಿಕೊಳ್ಳುವ ಸುಳಿವನ್ನು ರಾಜ್ಯ ಸರ್ಕಾರ ನೀಡಿದೆ.
ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಭಾಗಕ್ಕೆ ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬರಲಿದೆ. ಅದು, ಬಹುತೇಕ ರಾಮನಗರ ಜಿಲ್ಲೆಯಲ್ಲೇ ಸ್ಥಾಪನೆಯಾಗುವ ಸಾಧ್ಯತೆ ಇದೆ.
ಆನೇಕಲ್‍ನ ಜಿಗಣಿ, ಕನಕಪುರ, ಮೈಸೂರು ರಸ್ತೆ, ತುಮಕೂರು ಸೇರಿದಂತೆ ಹಲವು ಸ್ಥಳಗಳನ್ನು ಗುರುತಿಸಲಾಗಿದೆ. ಪ್ರಯಾಣಿಕರು ಹೆಚ್ಚು ಎಲ್ಲಿ ಲಭಿಸುತ್ತಾರೆ ಎಂಬುದು ಮಾತ್ರವಲ್ಲದೇ ರಸ್ತೆ, ರೈಲು ಮತ್ತು ಮೆಟ್ರೊ ರೈಲಿನ ಸಂಪರ್ಕವಿರುವ ಪ್ರದೇಶವನ್ನು ಗುರುತಿಸಿ, ವಿಮಾನ ನಿಲ್ದಾಣ ಸ್ಥಾಪಿಸುವ ಉದ್ದೇಶ ಸರ್ಕಾರದ್ದು. ಈ ಹಿನ್ನೆಲೆಯಲ್ಲಿ ಕನಕಪುರ, ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮೂಲಸೌಕರ್ಯ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿದ್ದು, ”ಹೊಸ ವಿಮಾನ ನಿಲ್ದಾಣ ಸ್ಥಾಪನೆಗೆ ಐದಾರು ಸ್ಥಳಗಳನ್ನು ಗುರುತಿಸಲಾಗಿದೆ. ಹಾಲಿ ವಿಮಾನ ನಿಲ್ದಾಣಕ್ಕೆ 60ರಿಂದ 70 ಕಿಲೋ ಮೀಟರ್ ದೂರದಲ್ಲಿ ನಿಲ್ದಾಣ ಸ್ಥಾಪನೆಗೆ ಸರ್ಕಾರ ಮುಂದಾಗಿದೆ” ಎಂದಿದ್ದಾರೆ.