ಬೆಂಗಳೂರು: ಅಬಕಾರಿ ಸುಂಕ ರಾಜ್ಯದ ಬೊಕ್ಕಸ ತುಂಬಿಸುವ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಮದ್ಯದ ಬೆಲೆ ಏರಿಕೆಯಿಂದ ಇತ್ತೀಚೆಗೆ ಅಬಕಾರಿ ಆದಾಯದಲ್ಲಿ ಕೊರತೆ ಕಂಡುಬರುತ್ತಿದೆ. ಈ ಮಧ್ಯೆ ಹಬ್ಬ ಹರಿದಿನ ಸೇರಿ ವಿವಿಧ ಕಾರಣಗಳಿಗಾಗಿ ಆಯಾ ಜಿಲ್ಲೆಗಳಲ್ಲಿನ ಮದ್ಯ ಮಾರಾಟ ನಿಷೇಧದಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 517 ಕೋಟಿ ರೂ. ಆದಾಯ ನಷ್ಟವಾಗಿದೆ
ರಾಜ್ಯದ ಬೊಕ್ಕಸ ತುಂಬಿಸುವ ಪ್ರಮುಖ ಮೂಲಗಳ ಪೈಕಿ ಅಬಕಾರಿ ಸುಂಕವೂ ಒಂದು. ಪ್ರಸಕ್ತ 2024-25ರ ಬಜೆಟ್ನಲ್ಲಿ 38,525 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹದ ಗುರಿ ಇಡಲಾಗಿದೆ. ಆದರೆ ಆರಂಭದಲ್ಲೇ ನಿರೀಕ್ಷಿತ ಅಬಕಾರಿ ಆದಾಯ ಸಂಗ್ರಹ ಸಾಧ್ಯವಾಗುತ್ತಿಲ್ಲ. ಬಜೆಟ್ ಗುರಿಯಂತೆ ಎರಡು ತಿಂಗಳಲ್ಲಿ 6,420 ಕೋಟಿ ರೂ. ಅಬಕಾರಿ ಸುಂಕ ಸಂಗ್ರಹಿಸಬೇಕಾಗಿದೆ. ಆದರೆ, ಎರಡು ತಿಂಗಳಲ್ಲಿ 5,450 ಕೋಟಿ ರೂ. ಮಾತ್ರ ಸಂಗ್ರಹಿಸಲಾಗಿದೆ. ಬಜೆಟ್ ಗುರಿಗಿಂತ 970 ಕೋಟಿ ರೂ. ಕುಂಟಿತವಾಗಿದೆ.
2023-24 ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅಬಕಾರಿ ಮೂಲಕ 36,000 ಕೋಟಿ ಆದಾಯ ಸಂಗ್ರಹದ ಗುರಿ ನಿಗದಿ ಪಡಿಸಿದ್ದರು. ಆದರೆ, ಆರ್ಥಿಕ ವರ್ಷದಲ್ಲಿ ಕೇವಲ 34,629 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹ ಮಾಡಲು ಸಾಧ್ಯವಾಯಿತು. ಬಜೆಟ್ ಗುರಿಗಿಂತ 1,371 ಕೋಟಿ ರೂ. ಸಂಗ್ರಹ ಕುಂಟಿತವಾಗಿತ್ತು. ಮದ್ಯ ದರ ಏರಿಕೆ ಹಿನ್ನೆಲೆ ಮದ್ಯ ಮಾರಾಟ ಪ್ರಮಾಣ ಕಡಿಮೆಯಾಗಿದ್ದು, ನಿರೀಕ್ಷಿತ ಆದಾಯ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲ ಮದ್ಯದ ಆದಾಯ ಖೋತಾಗೆ ಹಬ್ಬ ಹರಿದಿನ, ವಿಶೇಷ ದಿನಗಳಂದು ಮದ್ಯ ಮಾರಾಟ ನಿಷೇಧಗಳಿಂದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗಿರುವುದಾಗಿ ಅಬಕಾರಿ ಇಲಾಖೆ ಮಾಹಿತಿ ನೀಡಿದೆ.
ಮದ್ಯ ಮಾರಾಟ ನಿಷೇಧದಿಂದ 517 ಕೋಟಿ ನಷ್ಟ: ಹಬ್ಬ ಹರಿದಿನಗಳು, ವಿಶೇಷ ದಿನಗಳು ಸೇರಿ ನಾನಾ ಕಾರಣಗಳಿಗಾಗಿ ಆಯಾ ಜಿಲ್ಲೆಗಳಲ್ಲಿ ಮದ್ಯ ಮಾರಾಟ ನಿಷೇಧ ಆದೇಶಗಳಿಂದ ಸರ್ಕಾರದ ಬೊಕ್ಕಸಕ್ಕೆ 2023-24 ಸಾಲಿನಲ್ಲಿ 517.30 ಕೋಟಿ ರೂ. ನಷ್ಟ ಅನುಭವಿಸಿದೆ. ಮೊನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಬಕಾರಿ ಆಯುಕ್ತರು ಈ ನಷ್ಟದ ಅಂಕಿ – ಅಂಶವನ್ನು ಸಭೆಯ ಮುಂದಿಟ್ಟಿದ್ದಾರೆ.
2023-24 ಸಾಲಿನಲ್ಲಿ ಹಬ್ಬ ಹರಿದಿನ, ಜಾತ್ರೆ, ಚುನಾವಣೆ, ಮತ ಎಣಿಕೆ, ವಿಶೇಷ ದಿನಗಳು ಹೀಗೆ ವಿವಿಧ ಕಾರಣಗಳಿಂದ ಜಿಲ್ಲಾವಾರು ಮದ್ಯ ಮಾರಾಟ ನಿಷೇಧದಿಂದ 517.30 ಕೋಟಿ ರೂ. ಆದಾಯ ಖೋತವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮದ್ಯ ಮಾರಾಟ ನಿಷೇಧ ಆದಾಯಗಳಿಂದ ದೇಶೀಯ ಮದ್ಯ (IML)ದಲ್ಲಿ 444.52 ಕೋಟಿ ರೂ. ನಷ್ಟವಾಗಿದ್ದರೆ, ಬಿಯರ್ನಲ್ಲಿ ಅಂದಾಜು 72.78 ಕೋಟಿ ರೂ. ಆದಾಯ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.