ಬೆಂಗಳೂರು : ಏಳನೇ ವೇತನ ಆಯೋಗದ ವರದಿ ಜಾರಿಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆಗಸ್ಟ್ ಒಂದರಿಂದ ಏಳನೇ ವೇತನ ಆಯೋಗ ಜಾರಿಗೆ ತೀರ್ಮಾನಿಸಲಾಗಿದೆ. ಆ ಮೂಲಕ ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ಮೂಲಕ ಭರ್ಜರಿ ಸಿಹಿ ಸುದ್ದಿ ನೀಡಿದೆ.
ಸಿಎಂ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಏಳನೇ ವೇತನ ಆಯೋಗ ವರದಿಯಲ್ಲಿ ಶಿಫಾರಸು ಮಾಡಿರುವಂತೆ 27.5%ರಷ್ಟು ವೇತನ ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ಬೊಮ್ಮಾಯಿ ಸರ್ಕಾರ ಕಳೆದ ವರ್ಷ ಮಾರ್ಚ್ನಲ್ಲಿ ಮಧ್ಯಂತರ ಪರಿಹಾರವಾಗಿ 17% ವೇತನ ಪರಿಷ್ಕರಣೆ ಮಾಡಿತ್ತು. ಈಗ ಏಳನೇ ವೇತನ ಆಯೋಗದ ವರದಿಯಂತೆ 27.5% ವೇತನ ಪರಿಷ್ಕರಣೆ ಮಾಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಪ್ರಸ್ತುತ 17% ಗೆ ಹೆಚ್ಚುವರಿಯಾಗಿ 10.5%ರಷ್ಟು ವೇತನ ಪರಿಷ್ಕರಿಸಲಾಗಿದೆ.
ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ವೇತನ ಪರಿಷ್ಕರಣೆ ಸಂಬಂಧ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ವೇತನ ಪರಿಷ್ಕರಣೆಯಿಂದ ಬೊಕ್ಕಸದ ಮೇಲಾಗುವ ಹೊರೆ, ಆರ್ಥಿಕ ಸ್ಥಿತಿಗತಿ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿ ಅಂತಿಮವಾಗಿ ವೇತನ ಪರಿಷ್ಕರಣೆಗೆ ಸಂಪುಟ ಸಭೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹಣಕಾಸು ಒತ್ತಡದ ಮಧ್ಯೆ ರಾಜ್ಯ ಸರ್ಕಾರಕ್ಕೆ ವೇತನ ಪರಿಷ್ಕರಣೆಯ ಅನಿವಾರ್ಯತೆ ಎದುರಾಗಿತ್ತು. ಇತ್ತ ರಾಜ್ಯ ಸರ್ಕಾರಿ ನೌಕರರು ಪ್ರತಿಭಟನೆಯ ಹಾದಿಗೆ ನಿರ್ಧರಿಸಿದ್ದರು. ಅಂತಿಮವಾಗಿ ಆಗಸ್ಟ್ 1ರಿಂದ ಏಳನೇ ವೇತನ ಆಯೋಗ ವರದಿ ಜಾರಿಗೆ ಸರ್ಕಾರ ತೀರ್ಮಾನಿಸಿದೆ.
ಲೋಕಸಭೆ ಚುನಾವಣೆ ಘೋಷಣೆಯ ಮುನ್ನ ಮಾ. 16 ರಂದು ಕೆ. ಸುಧಾಕರ್ ರಾವ್ ಅಧ್ಯಕ್ಷತೆಯ ವೇತನ ಆಯೋಗ ವರದಿಯನ್ನು ಸಲ್ಲಿಸಿತ್ತು. 30 ವಿವಿಧ ಶಿಫಾರಸುಗಳೊಂದಿಗೆ ವರದಿಯನ್ನು ಸಿಎಂ ಸಿದ್ದರಾಮಯ್ಯಗೆ ಸಲ್ಲಿಕೆ ಮಾಡಲಾಗಿತ್ತು. ವೇತನ ಆಯೋಗದ ವರದಿ ಶಿಫಾರಸ್ಸಿನಂತೆ 27.5% ವೇತನ ಪರಿಷ್ಕರಣೆ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ 2024-25ನೇ ಸಾಲಿನಲ್ಲಿ 17,440.15 ಕೋಟಿ ರೂ. ವಾರ್ಷಿಕ ಹೆಚ್ಚುವರಿ ಹೊರೆ ಬೀಳಲಿದೆ.
27.5% ಪರಿಷ್ಕರಣೆಯಂತೆ ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ ತಿಂಗಳಿಗೆ ಅಸ್ತಿತ್ವದಲ್ಲಿರುವ ರೂ. 17,000 ರಿಂದ ರೂ. 27,000ಗೆ ಹೆಚ್ಚಿಗೆ ಆಗಲಿದೆ. 2024-25 ಸಾಲಿನ ಬಜೆಟ್ನಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವೇತನ ಪರಿಷ್ಕರಣೆ ಹಿನ್ನೆಲೆ 15,000 ಕೋಟಿ ರೂ. ಮೀಸಲಿಟ್ಟಿದ್ದಾರೆ. ಅಂದರೆ ಇನ್ನೂ 2,500 ಕೋಟಿ ರೂ. ಹೆಚ್ಚುವರಿ ಹಣ ಬೇಕಾಗಿದೆ. ಈ ನಿಟ್ಟಿನಲ್ಲಿ ಸಂಪನ್ಮೂಲ ಕ್ರೋಢೀಕರಣ ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ.