ಬೆಂಗಳೂರು: ಹಾವೇರಿ ಮೂಲದ 60 ವರ್ಷ ವಯಸ್ಸಿನ ಫಕೀರಪ್ಪ ಎಂಬ ರೈತರು ಸಾಂಪ್ರದಾಯಿಕ ಪಂಚೆ ಧರಿಸಿ ಬಂದಿದ್ದರು ಎಂಬ ಕಾರಣಕ್ಕೆ ಒಳಗೆ ಬಿಡದೆ ಅವಮಾನಿಸಿದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಜಿ ಟಿ ಮಾಲ್ ಗೆ 7 ದಿನ ಬೀಗ ಬಿದ್ದಿದೆ.
ವ್ಯಕ್ತಿಯ ಬಟ್ಟೆ ನೋಡಿ ಅವಮಾನಿಸಿದ ಜಿ ಟಿ ಮಾಲ್ ಗೆ ಏಳು ದಿನ ಬೀಗ ಜಡಿಯಲಾಗುವುದು. ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಕಾನೂನಿನಲ್ಲಿ ಶಿಕ್ಷೆಗೆ ಅವಕಾಶವಿದೆ ಎಂದಿದ್ದಾರೆ. ಹೀಗಾಗಿ ಮಾಲ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು
ಸದನದಲ್ಲಿ ಜಿ.ಟಿ ಮಾಲ್ ನಲ್ಲಿ ರೈತನಿಗೆ ಅವಮಾನ ಆದ ವಿಚಾರ ಚರ್ಚೆಗೆ ಕಾರಣವಾಯ್ತು. ಜಿಟಿ ಮಾಲ್ ಒಳಗೆ ಪಂಚೆ ಉಟ್ಟ ರೈತನನ್ನ ಬಿಡದೆ ಅವಮಾನಿಸಿದ ವಿಚಾರವಾಗಿ ಸ್ಪೀಕರ್ ಯು.ಟಿ.ಖಾದರ್ ಗರಂ ಆದರು. ಅವನು ಎಷ್ಟೇ ದೊಡ್ಡವನು ಇರಲಿ, ಅವನಿಗೆ ತೋರಿಸಬೇಕು. ಅವಮಾನ ಮಾಡಿದ್ದನ್ನು ಖಂಡಿಸಬೇಕು. ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದರು.
ಎಲ್ಲ ಮಾಲ್ ಗಳಿಗೂ ಒಂದೇ ರೂಲ್ಸ್ ಮಾಡಬೇಕು. ಪಂಚೆ ನಮ್ಮ ಸಂಸ್ಕೃತಿ ಎಂದ ಸ್ಪೀಕರ್ ಮಾತಿಗೆ ಧ್ವನಿಗೂಡಿಸಿದ ಶಾಸಕ ಲಕ್ಷಣ ಸವದಿ, ಸರ್ಕಾರದಿಂದ ಒಂದು ಆದೇಶ ಹೊರಡಿಸಲಿ, ಆ ಮಾಲ್ ಗೆ ವಾರಗಳ ಕಾಲ ಪವರ್ ಕಟ್ ಮಾಡಲಿ ಎಂದು ಆಗ್ರಹಿಸಿದರು.
ಈ ಘಟನೆ ಮೊನ್ನೆ ಮಂಗಳವಾರ ನಡೆದಿದ್ದು ಸುದ್ದಿ ಮಾಧ್ಯಮಗಳಲ್ಲಿ ಇಂದು ವ್ಯಾಪಕವಾಗಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಮಾಲ್ ಮಾಲೀಕರು ಒಳಗೆ ಬಿಡದ ವಾಚ್ ಮೆನ್ ನ್ನು ಕೆಲಸದಿಂದ ವಜಾ ಮಾಡಿದ್ದಲ್ಲದೆ ರೈತ ಫಕೀರಪ್ಪನನ್ನು ಕರೆದು ಮಾಲ್ ನಲ್ಲಿ ಇಂದು ಸನ್ಮಾನಿಸಿದ್ದಾರೆ. ಮಾಲ್ ಇನ್ಚಾರ್ಜ್ ಸುರೇಶ್ ಅವರು ಫಕೀರಪ್ಪಗೆ ಕ್ಷಮೆಯಾಚಿಸಿದ್ದಾರೆ.