ಪುರಿ(ಒಡಿಶಾ): 12ನೇ ಶತಮಾನದ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನಭಂಡಾರದ ಒಳಕೋಣೆಯೊಳಗಿನ ಅತ್ಯಮೂಲ್ಯ ವಸ್ತುಗಳು ಮತ್ತು ಆಭರಣಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದೆ. 46 ವರ್ಷಗಳ ನಂತರ ಜುಲೈ 14ರಂದು ರತ್ನಭಂಡಾರದ ಒಳಗಿನ ಖಜಾನೆ ಮತ್ತು ಹೊರ ಖಜಾನೆಯನ್ನು ತೆರೆಯಲಾಗಿದ್ದು, ಈ ಒಂದು ವಾರದೊಳಗೆ ಒಳಕೋಣೆಯನ್ನು ಎರಡನೇ ಬಾರಿಗೆ ತೆರೆಯಲಾಗಿದೆ.
ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ, ಒಡಿಶಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿಸ್ವನಾಥ್ ರಾತ್ ಸೇರಿದಂತೆ 11 ಸದಸ್ಯರ ತಂಡ ಬೆಳಗ್ಗೆ 9.51ಕ್ಕೆ ರತ್ನಭಂಡಾರವನ್ನು ತೆರೆಯಿತು. ಖಜಾನೆ ತೆರೆಯುವ ಮುನ್ನ ಸಮಿತಿಯು ಸುಗಮ ಕಾರ್ಯಾಚರಣೆಗಾಗಿ ಜಗನ್ನಾಥನ ಆಶೀರ್ವಾದ ಪಡೆಯಿತು.
ಸ್ಥಳಾಂತರ ಪೂರ್ಣಗೊಂಡ ಬಳಿಕ ಶ್ರೀ ಜಗನ್ನಾಥ ದೇವಾಲಯದ ಆಡಳಿತ (ಎಸ್‌ಜೆಟಿಎ) ಮುಖ್ಯಸ್ಥ ಅರಬಿಂದ ಪಾಧಿ ಸುದ್ದಿಗಾರರೊಂದಿಗೆ ಮಾತನಾಡಿ, ”ರತ್ನಭಂಡಾರದ ಒಳಕೋಣೆಯಿಂದ ಎಲ್ಲ ಬೆಲೆಬಾಳುವ ವಸ್ತುಗಳನ್ನು ದೇವಾಲಯದ ಸಂಕೀರ್ಣದೊಳಗಿನ ತಾತ್ಕಾಲಿಕ ಸ್ಟ್ರಾಂಗ್ ರೂಮ್‌ಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ಮರದ ಮತ್ತು ಉಕ್ಕಿನ ಅಲ್ಮಿರಾಗಳು ಸೇರಿದಂತೆ ಏಳು ಕಂಟೇನರ್‌ಗಳನ್ನು ಒಳಗೊಂಡಿರುವ ಸಂಪೂರ್ಣ ಸ್ಥಳಾಂತರ ಪ್ರಕ್ರಿಯೆ ಏಳು ಗಂಟೆ ತೆಗೆದುಕೊಂಡಿತು. ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‌ಒಪಿ) ಮಾರ್ಗಸೂಚಿಗಳ ಪ್ರಕಾರ, ಒಳಗಿನ ಕೋಣೆ ಮತ್ತು ತಾತ್ಕಾಲಿಕ ಸ್ಟ್ರಾಂಗ್ ರೂಮ್ ಎರಡನ್ನೂ ಲಾಕ್ ಮಾಡಿ, ಸೀಲ್ ಮಾಡಲಾಗಿದೆ” ಎಂದು ಹೇಳಿದರು.